Monday, November 24, 2008

ಫೋನ್ ದರ್ಶನ

ಹೆಜ್ಜೆ ಹಾಕತೊಡಗಿದಂತೆ ಪುರಿಯ ವೇಗ ಜಾಸ್ತಿಯಾಯಿತು. ಪುರಿ ಹಾಸ್ಟೆಲ್ನಲ್ಲಿ ಇದ್ದಂತೆ ಇರಲಿಲ್ಲ.. ಮನೆಗೆ ಬಂದ ಮೇಲೆ ಸ್ವಲ್ಪ ಜವಾಬ್ದಾರಿ ಬಂದಂತೆ ವರ್ತಿಸುತ್ತಿದ್ದ. ನನಗೆ ಒಂಥರಾ ಅನಿಸುತ್ತಿತ್ತು.. ಕ್ಷಣ ಬಾಯಿಮುಚ್ಚಲೂ ಹಿಂದೆ ಮುಂದೆ ನೋಡುವ ನಾನು ಸುಮ್ಮನಿರಬೇಕಾದ ಸಂದರ್ಭವನ್ನು ಪರಿಸ್ಥಿತಿ ಸೃಷ್ಟಿಸಿತ್ತು... ಪರಿಸ್ಥಿತಿ ಹೇಗೇ ಇರಲಿ ಈ ಪುರಿ ಮಾತ್ರ ಹೀಗೆ ಮಾತಿಲ್ಲದೆ ಸುಮ್ಮನೆ ನಡೆದುಕೊಂಡು ಹೋಗಬಾರದಿತ್ತು. ನಾನೇ ಯಥಾ ಪ್ರಕಾರ ಪ್ರಾರಂಭಿಸಿದೆ..

"ಏ ನಿಲ್ಲೋ ನಾನೊಬ್ಬ ಇದೀನಿ ಅನ್ನೋದನ್ನೇ ಮರೆತು ಓಡ್ತಾಇದ್ದೀಯಲ್ಲ...ಅಲ್ಲ ಬಂದ ದಿನನೇ ಹಿಂಗೆ ಉತ್ಸಾಹ ಎಲ್ಲಾ ಬತ್ತಿ ಹೋದ್ರೆ ಹೆಂಗೆ..."

"ದೇವ್ರು ಹೀಗೆ ದಯಮಾಡಿಸಿ.." ಮಹಾರಾಜನ ಸೇವಕನ ಭಂಗಿಯಲ್ಲಿ ನಿಂತು ಪುರಿ ನಾಟಕೀಯವಾಗಿ ಹಾಸ್ಯ ಮಾಡಲು ಯತ್ನಿಸಿದ.
ಲೋ.. ಅಮ್ಮನಿಗೆ ಒಂದ್ ಫೊನ್ ಮಾಡ್ಬೇಕಿತ್ತು... ಇಲ್ಲಾಂದ್ರೆ ಸುಮ್ಮನೆ ಗಾಬ್ರಿಯಾಗ್ತಾರೆ.. ನಡಿ ಇಲ್ಲೇ ಎಲ್ಲಾದ್ರೂ ಎಸ್.ಟಿ.ಡಿ ಬೂತ್ ಇದ್ರೆ ಬೇಗ ಹೋಗ್ ಬರೋಣ.. ಅಂದೆ. ಅವನ ಊರಿನಲ್ಲಿ ಮೊಬೈಲ್ ಅನ್ನೋದು ಮರುಭೂಮಿಯಲ್ಲಿರುವ ಕೆರೆಯಂತಾಗಿತ್ತು. ಅವರ ಮನೆಯಲ್ಲೂ ಫೋನ್ ಇರಲಿಲ್ಲ.
ಇಲ್ಲೆಲ್ಲೋ ಎಸ್.ಟಿ.ಡಿ. ಬೂತು.. ನಡಿ ಜೋಯಿಸರ ಬೂತಿಗೆ.. ಬೆಳಗ್ಗೆ ಅಪ್ಪ ಹೋಗಿ ಬರ್ಲಿಲ್ವಾ.. ಅದೇ ಜೋಯಿಸರು.. ಇಲ್ಲೇ ಇದೆ ಅವರ ಮನೆ.. ಹೋಗ್ ಬರೋಣ.. ಹೀಗಂದು ಪಕ್ಕದಲ್ಲೇ ಇದ್ದ ಅಡ್ಡ ದಾರಿ ಹಿಡಿದು ಹೊರಟ ಪುರಿ.
ಅಂತೂ ಇಷ್ಟು ಚಿಕ್ಕ ವಯಸ್ಸಲ್ಲೇ ಅಡ್ಡ ದಾರಿ ಹಿಡಿದೆಯಲ್ಲೋ.. ಅಣಕವಾಡಿದೆ. ಪುರಿಗೂ ಅಂತ ಹಾಸ್ಯ ಇಷ್ಟ. ಸ್ವಲ್ಪ ದೂರ ಹೋಗುತ್ತಿದ್ದಂತೆ ಜೋಯಿಸರ ಮನೆಯಂತ ಮನೆ ಎದುರಾಯಿತು. ಯಾಕೆಂದರೆ ಜೋಯಿಸರ ಮನೆ ಮನೆಯಂತಿರಲಿಲ್ಲ. ಹಳೇ ಪಾಳುಬಿದ್ದ ಗೂಡಂತಿತ್ತು. ಸೋಗೆ ಹಾಕಿದ ಮಾಡುಮಣ್ಣಿನ ವರಾಂಡ.. ಅಂಗಳದಲ್ಲಿ ಅಲ್ಲಲ್ಲಿ ಬೆಳೆದ ಹುಲ್ಲುಸಸ್ಯಗಳು.. ಎದುರೊಂದು ಮಣ್ಣಿನ ತುಳಸೀ ಕಟ್ಟೆ..ಪಕ್ಕದಲ್ಲೇ ಕಟ್ಟಿರುವೆಯ ದೊಡ್ಡ ಸಾಲು.. ಇನ್ನೇನೂ ಬಣ್ಣಿಸಲು ಉಳಿದಿರಲಿಲ್ಲ.
ಮನೆಯ ಬಾಗಿಲು ನನಗೆ ಸ್ವಲ್ಪ ಚಿಕ್ಕದೇ ಆಗಿತ್ತು... ಬಾರೋ.. ಪುರಿ ಮನೆಯ ಒಳಗೆ ನಡೆದ.. ಅಲ್ವೋ ಯಾರಾದ್ರೂ ಇದಾರೇನೋ ಇಲ್ಲಿ.. ಅಂತ ಕೇಳುವಷ್ಟರಲ್ಲಿ ಅರೇ ಪುರಿ ಯಾವಾಗ್ ಬಂದೆ ಧ್ವನಿ ಬಂದ ಕಡೆ ತಿರುಗಿದೆ.
ಜೋಯಿಸರ ಹೆಂಡತಿ..ಕೈಲೊಂದು ದನಗಳಿಗೆ ಹಾಕುವ ಬೂಸಾ ತುಂಬಿದ ಪಾತ್ರೆ... ಮೊಣಕಾಲವರೆಗೆ ಎತ್ತಿ ಕಟ್ಟಿದ ಸೀರೆ.. ಇವೆರಡೂ ಕೊಟ್ಟಿಗೆಯಿಂದ ಬಂದದ್ದನ್ನು ಸೂಚಿಸುತ್ತಿದ್ದವು.
ಇವತ್ತು ಬೆಳಿಗ್ಗೆ..ಇಂವ ನನ್ನ ಫ್ರೆಂಡು..
ಕೂತ್ಕಳಿ ಅವ್ರು ಪೂಜೆ ಮಾಡ್ತಿದ್ರು..ಬತ್ರು..
ಸರಿ.. ಪುರಿ ಅಲ್ಲೇ ಇದ್ದ ಬಿದಿರಿನ ಕುರ್ಚಿಯಲ್ಲಿ ಕುಳಿತ..ನಾನು ಪಕ್ಕದಲ್ಲಿದ್ದ ಆರಾಮ ಕುರ್ಚಿಯಲ್ಲಿ ಕುಳಿತೆ.. ಸುತ್ತಲೂ ನೋಡಿದೆಮಣ್ಣೀನ ಗೋಡೆಗಳು ಸುಣ್ಣ ಕಾಣದೆ ಸಣ್ಣ ಮುಖಮಾಡಿಕೊಂಡಿದ್ದವು.ಗೋಡೆಗೆ ನೇತು ಹಾಕಿದ ಲೋಲಕದ ದೊಡ್ಡ ಗಡಿಯಾರ ಮಾತ್ರ ತಾನು ಇದ್ದೇನೆಂಬುದನ್ನು ಕೂಗಿ ಹೇಳುತ್ತಿತ್ತು..ಉಳಿದಂತೆ ಎರಡು ದೇವರ ಫೋಟೋಗಳು ಹಾಗೂ ಜೋಯಿಸರ ಅಂಗಿ ಮೌನವಹಿಸಿ ತಮ್ಮಷ್ಟಕ್ಕೆ ತಾವು ನೇತಾಡುತ್ತಿದ್ದವು.. ಅಂಗಳದ ಆ ತುದಿಯಲ್ಲಿದ್ದ ಕೊಟ್ಟಿಗೆಯನ್ನು ಜೋಯಿಸರ ಪತ್ನಿ ಹೋಗಿ ಮುಟ್ಟಿಯಾಗಿತ್ತು.
ಮನೆಯೊಳಗಿಂದ ಗಂಟೆಯ ಶಬ್ದ ಬಿಟ್ಟರೆ ಇನ್ನೇನೂ ಕೇಳುತ್ತಿರಲಿಲ್ಲ..ಆಗಾಗ ಮಂತ್ರಗಳು ಕೇಳಿಸುತ್ತಿದ್ದವು.. ಏನೋ ಈ ಮನೆ ವಿಚಿತ್ರವಾಗಿದೆ.. ಅಂದೆ.. ಏನಿಲ್ವೋ ಆ ಖಂಜೂಸು ಜೋಯಿಸರು ಹೀಗಿಟ್ಟುಕೊಂಡಿದ್ದಾರೆ.. ಪುರಿ ಪಿಸುಗುಟ್ಟಿದ. ಪೂಜೆ ಜೋರಾಗುತ್ತಿತ್ತು..
ಮತ್ತೆ ಜೋಯಿಸರ ಹೆಂಡತಿ ಬಂದು ಶರಬತ್ ಮಾಡ್ಲಾ?... ಅಂದಾಗ ಬೇಡ ಅಂತಾನೇ ಅಂದ್ವಿ..ಆದ್ರೆ ಅವ್ರು ಕೇಳಲಿಲ್ಲ...
ಇಲ್ಲ ಅದೆಲ್ಲಾ ಬೇಡ... ಬೆಂಗ್ಳೂರಿಗೆ ಒಂದ್ ಫೋನ್ ಮಾಡ್ಬೇಕಿತ್ತು.. ಅದಕ್ಕೆ..
ಅಯ್ಯೋ ಮಾಡಿ.. ಇಲ್ಲೇ ಫೋನ್ ಇದೆ... ನಾನು ಶರಬತ್ ತರ್ತೇನೆ.. ಅಂತ ಹೇಳಿ ಫೋನ್ ಮೇಲಿದ್ದ ನೀಲಿ ಬಣ್ಣದ ಕುಸುರಿ ಮಾಡಿದ್ದ ಟವೆಲ್ ಒಂದನ್ನ ತಗೆದು ಫೋನ್ ದರ್ಶನ ಮಾಡಿಸಿದರು.
ಕರೀ ಬಣ್ಣದ ಮಂಚದ ಬಗ್ಗೆ ಹೇಳಲು ಮರೆತೇ ಹೋಗಿತ್ತು.. ನಾವು ಕುಳಿತಿದ್ದ ಪಕ್ಕದಲ್ಲೇ ಮಂಚ ಒಂದಿತ್ತು... ಕರೇ ಬಣ್ಣದ್ದು.. ಅಷ್ಟೇ ಅದರ ವರ್ಣನೆ.. ಅದರ ಮೇಲೊಂದು ಎಲೆ ಅಡಿಕೆ ಹಾಕುವ ಬಟ್ಟಲು.. ಈ ಅಂಚಿನಲ್ಲಿ ಫೋನು.. ಆ ಫೋನ್ ನೋಡಿದರೆ ಬಿ.ಎಸ್.ಎನ್.ಎಲ್ ನವರಿಗೂ ಗುರುತು ಹತ್ತುವುದಿಲ್ಲ... ಕೆಲವೊಂದು ನಂಬರ್ಗಳೇ ಮಾಯವಾಗಿತ್ತು... ಫೋನ್ಗೆ ಅಳವಡಿಸಿದ್ದ ಕೆಂಪು ದೀಪವೊಂದು ಹೊರಗೆ ಯಾರಿರಬಹುದು ಎಂದು ಇಣುಕುತಿತ್ತು...ರಿಸೀವರ್ ಎಲೆ ಅಡಿಕೆ ರಸ ಬಿದ್ದು ಕೆಂಪಾಗಿತ್ತು. ಪಕ್ಕದಲ್ಲೇ ಇದ್ದ ಕಡ್ಡಿ ಒಂದನ್ನು ತೆಗೆದುಕೊಂಡು ಕೆಲವು ನಂಬರ್ಗಳನ್ನು ಒತ್ತಬೇಕಾಗಿತ್ತು.. ಹೇಗೋ ಕಷ್ಟಪಟ್ಟು ಡಯಲ್ ಮಾಡುತ್ತಿದ್ದಂತೆ ಜೋಯಿಸರು ಹೊರ ಬಂದರು.
ಕೈಯಲ್ಲಿ ಆರತಿ ಇತ್ತು.. ಕೂತಿರಿ ಅಂತ ಕೈ ಸನ್ನೆ ಮಾಡುತ್ತಾ ಬಾಯಲ್ಲಿ ಮಂತ್ರಪ್ರವಾಹವನ್ನು ಹರಿಸುತ್ತಿದ್ದರು. ನೇತುಹಾಕಿದ್ದ ಫೋಟೋಗಳಿಗೆಲ್ಲಾ ಪೂಜೆ ನಡೀತು.. ಅವರು ಒಳಗೆ ಹೋಗಿ ಪೂಜೆ ಮುಗಿಸಿ ಬರುವಷ್ಟರಲ್ಲಿ ನಾನೂ ಮಾತು ಮುಗಿಸಿ ಫೋನಿಟ್ಟೆ..
ಹೆಣ್ಣು ಮಗಳೊಬ್ಬಳು ಶರಬತ್ ತಂದಿಟ್ಟು ಹೋದಳು..ನಮ್ಮ ಕಡೆ ಓರೆ ನೋಟವನ್ನೂ ಬೀರಲಿಲ್ಲ. ಯಾರೋ ಅದು.. ಶರಬತ್ ಕುಡಿಯುತ್ತಾ ಪಿಸುಗುಟ್ಟಿದೆ.. ನನ್ನ ಮಗಳು ಶಾಂಭವಿ .. ಕಾಲು ಸ್ವಲ್ಪ ಕುಂಟು.. ಸಣ್ಣಿರಬೇಕಾದ್ರೆ ಬಿದ್ದದ್ದು ಇನ್ನೂ ಹಾಗೇ ಇದೆ.. ಪೆಚ್ಚು ನಗುವಿನೊಂದಿಗೆ ಜೋಯಿಸರು ಮಾತು ಪ್ರಾರಂಭಿಸಿದರು. ನಡೆಯಬೇಕಾದರೆ ಗಮನಿಸಿ ನೋಡಿದರೆ ಮಾತ್ರ ಕುಂಟು ಗೊತ್ತಾಗುತ್ತಿತ್ತು. ಅವರ ಆ ನಗುವಿನಲ್ಲಿ ಏನೋ ವಿಷಾದ ಮನೆ ಮಾಡಿದಂತಿತ್ತು..
ಕುಡೀರೀ.. ಸಕ್ರೆ ಹಾಕದ್ದು ಸರಿಯಾಯ್ದು ನೋಡಿ.. ಜೋಯಿಸರ ಹೆಂಡತಿ ಆದರಾತಿಥ್ಯವನ್ನು ಸ್ವಲ್ಪ ಜೋರಾಗೇ ಮಾಡಿದಂತಿತ್ತು. ಫೋನ್ ಮಾಡಲು ಬಂದವರಿಗೆ ಎಲ್ಲೂ ಈ ರೀತಿ ಸವಲತ್ತುಗಳು ಲಭ್ಯವಿಲ್ಲ.. ಅದಕ್ಕಾಗಿಯೆು ಈ ಊರಿನಲ್ಲಿ ಎಸ್.ಟಿ.ಡಿ. ಬೂತ್ ವ್ಯಾಪಾರ ನಡೆಯುವುದಿಲ್ಲ ಅನಿಸಿತು..
ಜೋಯಿಸರು ಜನಿವಾರ ತಿಕ್ಕಿಕೊಳ್ಳುತ್ತಾ ನಿಮ್ಮನ್ನ ಬೆಳಗ್ಗೆನೇ ದೇವಸ್ಥಾನದಲ್ಲಿ ನೋಡ್ದೆ.. ಮಾತಾಡ್ಸಲಾಯ್ದಿಲ್ಲೆ... ಯಾರಿಂವ..? ನನ್ನ ಕಡೆ ಪ್ರಶ್ನಾರ್ಥಕ ಚಿಹ್ನೆ.. ಅದಕ್ಕೆ ಮತ್ತೆ ಅದೇ ವಿವರಗಳೊಂದಿಗೆ ಪುರಿಯ ಉತ್ತರ.. ಸಂತೋಷ.. ಫೋನ ಮಾಡಾತ..? ನಾನು ತಲೆ ಆಡಿಸಿದೆ..
ವಸಂತ ಎಲ್ಲಿ.. ಜೋಯಿಸರೇ? ಪುರಿ ಹೊಸ ಸುದ್ದಿ ಪ್ರಾರಂಭಿಸಿದ..
ಅಂವ ಇಲ್ಲೆಲ್ಲಿರ್ತ..? ಗೋವೆಗೆ ಹೋಗಿ ಮೂರು ತಿಂಗಳಾತು.. ವಾರಕ್ಕೊಂದು ಸಲ ಫೋನಾ ಮಾಡ್ತಾ..ಅದೂ ಒಂದೊಂದ್ಸಲ ಇಲ್ಲೆ.. ವಿಷಾದಕ್ಕೊಂದು ಅರ್ಥ ಬಂದಂತಾಯಿತು.
ಗೋವಾ.. ಅಲ್ಲೇನು?
ಅದೇ ಎನೋ ಬಿಸನೆಸ್ ಅಂತೆ..ಏನ್ ಹಾಳ್ ಬಿಸನೆಸ್ಸೋ ಏನೋ..ಇಲ್ಲಿರೋ ಬಂಗಾರದಂತಾ ತೋಟ ಬಿಟ್ಟು.. ಮುಖ ಸಿಂಡಿಸಿರಿಕೊಂಡರು.. ಮಗನ ಮೇಲೆ.. ಎಷ್ಟೂಂತ ನಾವ್ ಹೇಳೋದು.. ಅವನ ಗೆಳೆಯರೆಲ್ಲಾ ಸೇರಿ ಅದೇನೋ ಚಟ್ಲಿ ಬಿಸನೆಸ್ ಮಾಡ್ತಾರಂತೆ.. ಬ್ರಾಹ್ಮಣರಿಗೆಲ್ಲಾ ಅದೆಲ್ಲಾ ಅಲ್ಲಾ.. ಹೇಳಿ ಗಿಳಿಗೆ ಹೇಳಿದಂಗೆ ಹೇಳ್ದೆ.. ಅಂವ ಎಲ್ಲಿ ಕೇಳ್ತಾ ನಂಗಳ ಮಾತು... ಮುಂದುವರಿಸಿದರು.
ಬಾಗಿಲ ಬಳಿ ಬಂದು ನಿಂತ ಶಾಂಭವಿ ಈಗ ನಮ್ಮತ್ತ ನೋಡಿದಳು.
ಇವಳೂ ಅಷ್ಟೆ.. ಅಣ್ಣನ ಹಾಗೆ ಹಠ.. ಕಾಲೇಜೆಲ್ಲಾ ಇವಳಿಗ್ಯಾಕೆ ಬೇಕಿತ್ತು.. ಅಂತ..
ಆಪ್ಪ..! ಶಾಂಭವಿ ಅಪ್ಪನ ಕಡೆ ಸುಮ್ಮನಿರುವಂತೆ ಸೂಚನೆ ಕೊಟ್ಟಳು..
ಕಾಲೇಜಿಗೆ ಹೋಗ್ತಾಳಾ.. ನಾನು ಬಾಯಿ ಬಿಟ್ಟೆ. ಹೌದು ಐ.ಟಿ.ಐ. ಮಾಡ್ತಾ ಇದೀನಿ ಅವಳೇ ಹೇಳಿದಳು. ಗುಡ್.. ಅಂತಂದೆ.
ಓ ದಿನೇಶನ ಕ್ಲಾಸ್ ಮೇಟಾ.. ಕೇಳಿದ್ದು ಪುರಿ ಈ ಸಲ.
ಹೌದೌದು ಆ ಹಾಳಾದವನ ಕ್ಲಾಸ್ಮೇಟೇ... ಉತ್ತರಿಸಿದ್ದು ಜೋಯಿಸರು.
ಹಾಂಗಂದ್ರೆ...? ಪುರಿ ಕೇಳಿದ.. ಅವನಿಗೂ ಅರ್ಥವಾದಂತಿರಲಿಲ್ಲ.
ಅದೇ .. ಆ ಇವಳ ಹಿಂದೆ ಬಿದ್ದಿದಾನಂತೆ.. ಕಾಲೇಜಿಗೆ ಹೋಗುವಾಗ ಬರುವಾಗ ಇವಳ ಹಿಂದೇ ನಾಯಿ ಥರಾ ಅಲಿತಾನಂತೆ... ನೋಡ್ದವರು ಏನೇನೋ ಮಾತಾಡ್ತಾರೆ.. ಇವಳಿಗೂ ಕಾಲೇಜ್ ಬಿಡು ಅಂದ್ರೆ ಕೇಳಲ್ಲ..
ಅಪ್ಪಾ.. ನಾನು ಕಾಲೇಜು ಬಿಡಲ್ಲ ಅಂದ್ರೆ ಬಿಡಲ್ಲ.. ದೃಢನಿರ್ಧಾರದೊಂದಿಗೆ ಒಳ ನಡೆದಳು ಶಾಂಭವಿ..
ನೀನೇನೆ ಅವ್ರಿಗೆ ಎದುರುತ್ತರ ಕೊಡೋದು.. ಅಂತ ಅವಳಮ್ಮನೂ ಅವಳ ಹಿಂದೆ ಒಳ ನಡೆದಳು.
ನಾವಿನ್ನು ಬರ್ತೇವೆ.. ನಾವೂ ಹೊರಟೆವು.. ಚಪ್ಪಲಿ ಹಾಕುತ್ತ ನಿಂತಿರುವಾಗ ನಮ್ಮ ಜೊತೆಗೇ ಬಂದ ಜೋಯಿಸರು ಪಿಸುಮಾತಿನಲ್ಲಿ ಮತ್ತೆ.. ಅದು ಈ ವಿಷಯ ನಿಮ್ಮಲ್ಲೇ ಇರಲಿ... ಆ ಪಾಂಡುಗೇನಾದ್ರೂ ಗೊತ್ತಾದ್ರೆ ಸುಮ್ಮನೆ ಕುಡಿದು ಗಲಾಟೆ ಮಾಡ್ತಾನೆ.. ಅದಕ್ಕೆ ಹೇಳ್ದೆ.. ಸುಮ್ಮನೆ ರಗಳೆ ಯಾಕೆ ಅಂತ.. ಹೇಳಿದ್ದು ನಾಟಕೀಯವಾಗಿತ್ತು.
ಫೋನ್ ಮಾಡಿದ್ರಲ್ಲ.. ಆರು ರುಪಾಯಿ ನಿನ್ನಪ್ಪನ ಹತ್ರ ಕೇಳ್ತೆ.. ಹೋಗ್ಬನ್ನಿ.. ಮತ್ತದೇ ಪೆಚ್ಚು ನಗೆ..
ಸಾರಿ ಮರ್ತೇ ಬಿಟ್ಟಿದ್ದೆ ತಗೊಳ್ಳಿ.. ಐದು ರೂಪಾಯಿ ನೋಟೊಂದು ಒಂದು ರೂಪಾಯಿ ನಾಣ್ಯವೊಂದನ್ನು ಜೋಯಿಸರ ಕೈಗಿಟ್ಟೆ.. ನಾವಿಬ್ಬರೂ ಹೊರಟೆವು.. ಕಟ್ಟಿರುವೆಗಳ ಸಾಲು ದಿಕ್ಕು ಬದಲಿಸಿತ್ತು..