Monday, November 24, 2008

ಫೋನ್ ದರ್ಶನ

ಹೆಜ್ಜೆ ಹಾಕತೊಡಗಿದಂತೆ ಪುರಿಯ ವೇಗ ಜಾಸ್ತಿಯಾಯಿತು. ಪುರಿ ಹಾಸ್ಟೆಲ್ನಲ್ಲಿ ಇದ್ದಂತೆ ಇರಲಿಲ್ಲ.. ಮನೆಗೆ ಬಂದ ಮೇಲೆ ಸ್ವಲ್ಪ ಜವಾಬ್ದಾರಿ ಬಂದಂತೆ ವರ್ತಿಸುತ್ತಿದ್ದ. ನನಗೆ ಒಂಥರಾ ಅನಿಸುತ್ತಿತ್ತು.. ಕ್ಷಣ ಬಾಯಿಮುಚ್ಚಲೂ ಹಿಂದೆ ಮುಂದೆ ನೋಡುವ ನಾನು ಸುಮ್ಮನಿರಬೇಕಾದ ಸಂದರ್ಭವನ್ನು ಪರಿಸ್ಥಿತಿ ಸೃಷ್ಟಿಸಿತ್ತು... ಪರಿಸ್ಥಿತಿ ಹೇಗೇ ಇರಲಿ ಈ ಪುರಿ ಮಾತ್ರ ಹೀಗೆ ಮಾತಿಲ್ಲದೆ ಸುಮ್ಮನೆ ನಡೆದುಕೊಂಡು ಹೋಗಬಾರದಿತ್ತು. ನಾನೇ ಯಥಾ ಪ್ರಕಾರ ಪ್ರಾರಂಭಿಸಿದೆ..

"ಏ ನಿಲ್ಲೋ ನಾನೊಬ್ಬ ಇದೀನಿ ಅನ್ನೋದನ್ನೇ ಮರೆತು ಓಡ್ತಾಇದ್ದೀಯಲ್ಲ...ಅಲ್ಲ ಬಂದ ದಿನನೇ ಹಿಂಗೆ ಉತ್ಸಾಹ ಎಲ್ಲಾ ಬತ್ತಿ ಹೋದ್ರೆ ಹೆಂಗೆ..."

"ದೇವ್ರು ಹೀಗೆ ದಯಮಾಡಿಸಿ.." ಮಹಾರಾಜನ ಸೇವಕನ ಭಂಗಿಯಲ್ಲಿ ನಿಂತು ಪುರಿ ನಾಟಕೀಯವಾಗಿ ಹಾಸ್ಯ ಮಾಡಲು ಯತ್ನಿಸಿದ.
ಲೋ.. ಅಮ್ಮನಿಗೆ ಒಂದ್ ಫೊನ್ ಮಾಡ್ಬೇಕಿತ್ತು... ಇಲ್ಲಾಂದ್ರೆ ಸುಮ್ಮನೆ ಗಾಬ್ರಿಯಾಗ್ತಾರೆ.. ನಡಿ ಇಲ್ಲೇ ಎಲ್ಲಾದ್ರೂ ಎಸ್.ಟಿ.ಡಿ ಬೂತ್ ಇದ್ರೆ ಬೇಗ ಹೋಗ್ ಬರೋಣ.. ಅಂದೆ. ಅವನ ಊರಿನಲ್ಲಿ ಮೊಬೈಲ್ ಅನ್ನೋದು ಮರುಭೂಮಿಯಲ್ಲಿರುವ ಕೆರೆಯಂತಾಗಿತ್ತು. ಅವರ ಮನೆಯಲ್ಲೂ ಫೋನ್ ಇರಲಿಲ್ಲ.
ಇಲ್ಲೆಲ್ಲೋ ಎಸ್.ಟಿ.ಡಿ. ಬೂತು.. ನಡಿ ಜೋಯಿಸರ ಬೂತಿಗೆ.. ಬೆಳಗ್ಗೆ ಅಪ್ಪ ಹೋಗಿ ಬರ್ಲಿಲ್ವಾ.. ಅದೇ ಜೋಯಿಸರು.. ಇಲ್ಲೇ ಇದೆ ಅವರ ಮನೆ.. ಹೋಗ್ ಬರೋಣ.. ಹೀಗಂದು ಪಕ್ಕದಲ್ಲೇ ಇದ್ದ ಅಡ್ಡ ದಾರಿ ಹಿಡಿದು ಹೊರಟ ಪುರಿ.
ಅಂತೂ ಇಷ್ಟು ಚಿಕ್ಕ ವಯಸ್ಸಲ್ಲೇ ಅಡ್ಡ ದಾರಿ ಹಿಡಿದೆಯಲ್ಲೋ.. ಅಣಕವಾಡಿದೆ. ಪುರಿಗೂ ಅಂತ ಹಾಸ್ಯ ಇಷ್ಟ. ಸ್ವಲ್ಪ ದೂರ ಹೋಗುತ್ತಿದ್ದಂತೆ ಜೋಯಿಸರ ಮನೆಯಂತ ಮನೆ ಎದುರಾಯಿತು. ಯಾಕೆಂದರೆ ಜೋಯಿಸರ ಮನೆ ಮನೆಯಂತಿರಲಿಲ್ಲ. ಹಳೇ ಪಾಳುಬಿದ್ದ ಗೂಡಂತಿತ್ತು. ಸೋಗೆ ಹಾಕಿದ ಮಾಡುಮಣ್ಣಿನ ವರಾಂಡ.. ಅಂಗಳದಲ್ಲಿ ಅಲ್ಲಲ್ಲಿ ಬೆಳೆದ ಹುಲ್ಲುಸಸ್ಯಗಳು.. ಎದುರೊಂದು ಮಣ್ಣಿನ ತುಳಸೀ ಕಟ್ಟೆ..ಪಕ್ಕದಲ್ಲೇ ಕಟ್ಟಿರುವೆಯ ದೊಡ್ಡ ಸಾಲು.. ಇನ್ನೇನೂ ಬಣ್ಣಿಸಲು ಉಳಿದಿರಲಿಲ್ಲ.
ಮನೆಯ ಬಾಗಿಲು ನನಗೆ ಸ್ವಲ್ಪ ಚಿಕ್ಕದೇ ಆಗಿತ್ತು... ಬಾರೋ.. ಪುರಿ ಮನೆಯ ಒಳಗೆ ನಡೆದ.. ಅಲ್ವೋ ಯಾರಾದ್ರೂ ಇದಾರೇನೋ ಇಲ್ಲಿ.. ಅಂತ ಕೇಳುವಷ್ಟರಲ್ಲಿ ಅರೇ ಪುರಿ ಯಾವಾಗ್ ಬಂದೆ ಧ್ವನಿ ಬಂದ ಕಡೆ ತಿರುಗಿದೆ.
ಜೋಯಿಸರ ಹೆಂಡತಿ..ಕೈಲೊಂದು ದನಗಳಿಗೆ ಹಾಕುವ ಬೂಸಾ ತುಂಬಿದ ಪಾತ್ರೆ... ಮೊಣಕಾಲವರೆಗೆ ಎತ್ತಿ ಕಟ್ಟಿದ ಸೀರೆ.. ಇವೆರಡೂ ಕೊಟ್ಟಿಗೆಯಿಂದ ಬಂದದ್ದನ್ನು ಸೂಚಿಸುತ್ತಿದ್ದವು.
ಇವತ್ತು ಬೆಳಿಗ್ಗೆ..ಇಂವ ನನ್ನ ಫ್ರೆಂಡು..
ಕೂತ್ಕಳಿ ಅವ್ರು ಪೂಜೆ ಮಾಡ್ತಿದ್ರು..ಬತ್ರು..
ಸರಿ.. ಪುರಿ ಅಲ್ಲೇ ಇದ್ದ ಬಿದಿರಿನ ಕುರ್ಚಿಯಲ್ಲಿ ಕುಳಿತ..ನಾನು ಪಕ್ಕದಲ್ಲಿದ್ದ ಆರಾಮ ಕುರ್ಚಿಯಲ್ಲಿ ಕುಳಿತೆ.. ಸುತ್ತಲೂ ನೋಡಿದೆಮಣ್ಣೀನ ಗೋಡೆಗಳು ಸುಣ್ಣ ಕಾಣದೆ ಸಣ್ಣ ಮುಖಮಾಡಿಕೊಂಡಿದ್ದವು.ಗೋಡೆಗೆ ನೇತು ಹಾಕಿದ ಲೋಲಕದ ದೊಡ್ಡ ಗಡಿಯಾರ ಮಾತ್ರ ತಾನು ಇದ್ದೇನೆಂಬುದನ್ನು ಕೂಗಿ ಹೇಳುತ್ತಿತ್ತು..ಉಳಿದಂತೆ ಎರಡು ದೇವರ ಫೋಟೋಗಳು ಹಾಗೂ ಜೋಯಿಸರ ಅಂಗಿ ಮೌನವಹಿಸಿ ತಮ್ಮಷ್ಟಕ್ಕೆ ತಾವು ನೇತಾಡುತ್ತಿದ್ದವು.. ಅಂಗಳದ ಆ ತುದಿಯಲ್ಲಿದ್ದ ಕೊಟ್ಟಿಗೆಯನ್ನು ಜೋಯಿಸರ ಪತ್ನಿ ಹೋಗಿ ಮುಟ್ಟಿಯಾಗಿತ್ತು.
ಮನೆಯೊಳಗಿಂದ ಗಂಟೆಯ ಶಬ್ದ ಬಿಟ್ಟರೆ ಇನ್ನೇನೂ ಕೇಳುತ್ತಿರಲಿಲ್ಲ..ಆಗಾಗ ಮಂತ್ರಗಳು ಕೇಳಿಸುತ್ತಿದ್ದವು.. ಏನೋ ಈ ಮನೆ ವಿಚಿತ್ರವಾಗಿದೆ.. ಅಂದೆ.. ಏನಿಲ್ವೋ ಆ ಖಂಜೂಸು ಜೋಯಿಸರು ಹೀಗಿಟ್ಟುಕೊಂಡಿದ್ದಾರೆ.. ಪುರಿ ಪಿಸುಗುಟ್ಟಿದ. ಪೂಜೆ ಜೋರಾಗುತ್ತಿತ್ತು..
ಮತ್ತೆ ಜೋಯಿಸರ ಹೆಂಡತಿ ಬಂದು ಶರಬತ್ ಮಾಡ್ಲಾ?... ಅಂದಾಗ ಬೇಡ ಅಂತಾನೇ ಅಂದ್ವಿ..ಆದ್ರೆ ಅವ್ರು ಕೇಳಲಿಲ್ಲ...
ಇಲ್ಲ ಅದೆಲ್ಲಾ ಬೇಡ... ಬೆಂಗ್ಳೂರಿಗೆ ಒಂದ್ ಫೋನ್ ಮಾಡ್ಬೇಕಿತ್ತು.. ಅದಕ್ಕೆ..
ಅಯ್ಯೋ ಮಾಡಿ.. ಇಲ್ಲೇ ಫೋನ್ ಇದೆ... ನಾನು ಶರಬತ್ ತರ್ತೇನೆ.. ಅಂತ ಹೇಳಿ ಫೋನ್ ಮೇಲಿದ್ದ ನೀಲಿ ಬಣ್ಣದ ಕುಸುರಿ ಮಾಡಿದ್ದ ಟವೆಲ್ ಒಂದನ್ನ ತಗೆದು ಫೋನ್ ದರ್ಶನ ಮಾಡಿಸಿದರು.
ಕರೀ ಬಣ್ಣದ ಮಂಚದ ಬಗ್ಗೆ ಹೇಳಲು ಮರೆತೇ ಹೋಗಿತ್ತು.. ನಾವು ಕುಳಿತಿದ್ದ ಪಕ್ಕದಲ್ಲೇ ಮಂಚ ಒಂದಿತ್ತು... ಕರೇ ಬಣ್ಣದ್ದು.. ಅಷ್ಟೇ ಅದರ ವರ್ಣನೆ.. ಅದರ ಮೇಲೊಂದು ಎಲೆ ಅಡಿಕೆ ಹಾಕುವ ಬಟ್ಟಲು.. ಈ ಅಂಚಿನಲ್ಲಿ ಫೋನು.. ಆ ಫೋನ್ ನೋಡಿದರೆ ಬಿ.ಎಸ್.ಎನ್.ಎಲ್ ನವರಿಗೂ ಗುರುತು ಹತ್ತುವುದಿಲ್ಲ... ಕೆಲವೊಂದು ನಂಬರ್ಗಳೇ ಮಾಯವಾಗಿತ್ತು... ಫೋನ್ಗೆ ಅಳವಡಿಸಿದ್ದ ಕೆಂಪು ದೀಪವೊಂದು ಹೊರಗೆ ಯಾರಿರಬಹುದು ಎಂದು ಇಣುಕುತಿತ್ತು...ರಿಸೀವರ್ ಎಲೆ ಅಡಿಕೆ ರಸ ಬಿದ್ದು ಕೆಂಪಾಗಿತ್ತು. ಪಕ್ಕದಲ್ಲೇ ಇದ್ದ ಕಡ್ಡಿ ಒಂದನ್ನು ತೆಗೆದುಕೊಂಡು ಕೆಲವು ನಂಬರ್ಗಳನ್ನು ಒತ್ತಬೇಕಾಗಿತ್ತು.. ಹೇಗೋ ಕಷ್ಟಪಟ್ಟು ಡಯಲ್ ಮಾಡುತ್ತಿದ್ದಂತೆ ಜೋಯಿಸರು ಹೊರ ಬಂದರು.
ಕೈಯಲ್ಲಿ ಆರತಿ ಇತ್ತು.. ಕೂತಿರಿ ಅಂತ ಕೈ ಸನ್ನೆ ಮಾಡುತ್ತಾ ಬಾಯಲ್ಲಿ ಮಂತ್ರಪ್ರವಾಹವನ್ನು ಹರಿಸುತ್ತಿದ್ದರು. ನೇತುಹಾಕಿದ್ದ ಫೋಟೋಗಳಿಗೆಲ್ಲಾ ಪೂಜೆ ನಡೀತು.. ಅವರು ಒಳಗೆ ಹೋಗಿ ಪೂಜೆ ಮುಗಿಸಿ ಬರುವಷ್ಟರಲ್ಲಿ ನಾನೂ ಮಾತು ಮುಗಿಸಿ ಫೋನಿಟ್ಟೆ..
ಹೆಣ್ಣು ಮಗಳೊಬ್ಬಳು ಶರಬತ್ ತಂದಿಟ್ಟು ಹೋದಳು..ನಮ್ಮ ಕಡೆ ಓರೆ ನೋಟವನ್ನೂ ಬೀರಲಿಲ್ಲ. ಯಾರೋ ಅದು.. ಶರಬತ್ ಕುಡಿಯುತ್ತಾ ಪಿಸುಗುಟ್ಟಿದೆ.. ನನ್ನ ಮಗಳು ಶಾಂಭವಿ .. ಕಾಲು ಸ್ವಲ್ಪ ಕುಂಟು.. ಸಣ್ಣಿರಬೇಕಾದ್ರೆ ಬಿದ್ದದ್ದು ಇನ್ನೂ ಹಾಗೇ ಇದೆ.. ಪೆಚ್ಚು ನಗುವಿನೊಂದಿಗೆ ಜೋಯಿಸರು ಮಾತು ಪ್ರಾರಂಭಿಸಿದರು. ನಡೆಯಬೇಕಾದರೆ ಗಮನಿಸಿ ನೋಡಿದರೆ ಮಾತ್ರ ಕುಂಟು ಗೊತ್ತಾಗುತ್ತಿತ್ತು. ಅವರ ಆ ನಗುವಿನಲ್ಲಿ ಏನೋ ವಿಷಾದ ಮನೆ ಮಾಡಿದಂತಿತ್ತು..
ಕುಡೀರೀ.. ಸಕ್ರೆ ಹಾಕದ್ದು ಸರಿಯಾಯ್ದು ನೋಡಿ.. ಜೋಯಿಸರ ಹೆಂಡತಿ ಆದರಾತಿಥ್ಯವನ್ನು ಸ್ವಲ್ಪ ಜೋರಾಗೇ ಮಾಡಿದಂತಿತ್ತು. ಫೋನ್ ಮಾಡಲು ಬಂದವರಿಗೆ ಎಲ್ಲೂ ಈ ರೀತಿ ಸವಲತ್ತುಗಳು ಲಭ್ಯವಿಲ್ಲ.. ಅದಕ್ಕಾಗಿಯೆು ಈ ಊರಿನಲ್ಲಿ ಎಸ್.ಟಿ.ಡಿ. ಬೂತ್ ವ್ಯಾಪಾರ ನಡೆಯುವುದಿಲ್ಲ ಅನಿಸಿತು..
ಜೋಯಿಸರು ಜನಿವಾರ ತಿಕ್ಕಿಕೊಳ್ಳುತ್ತಾ ನಿಮ್ಮನ್ನ ಬೆಳಗ್ಗೆನೇ ದೇವಸ್ಥಾನದಲ್ಲಿ ನೋಡ್ದೆ.. ಮಾತಾಡ್ಸಲಾಯ್ದಿಲ್ಲೆ... ಯಾರಿಂವ..? ನನ್ನ ಕಡೆ ಪ್ರಶ್ನಾರ್ಥಕ ಚಿಹ್ನೆ.. ಅದಕ್ಕೆ ಮತ್ತೆ ಅದೇ ವಿವರಗಳೊಂದಿಗೆ ಪುರಿಯ ಉತ್ತರ.. ಸಂತೋಷ.. ಫೋನ ಮಾಡಾತ..? ನಾನು ತಲೆ ಆಡಿಸಿದೆ..
ವಸಂತ ಎಲ್ಲಿ.. ಜೋಯಿಸರೇ? ಪುರಿ ಹೊಸ ಸುದ್ದಿ ಪ್ರಾರಂಭಿಸಿದ..
ಅಂವ ಇಲ್ಲೆಲ್ಲಿರ್ತ..? ಗೋವೆಗೆ ಹೋಗಿ ಮೂರು ತಿಂಗಳಾತು.. ವಾರಕ್ಕೊಂದು ಸಲ ಫೋನಾ ಮಾಡ್ತಾ..ಅದೂ ಒಂದೊಂದ್ಸಲ ಇಲ್ಲೆ.. ವಿಷಾದಕ್ಕೊಂದು ಅರ್ಥ ಬಂದಂತಾಯಿತು.
ಗೋವಾ.. ಅಲ್ಲೇನು?
ಅದೇ ಎನೋ ಬಿಸನೆಸ್ ಅಂತೆ..ಏನ್ ಹಾಳ್ ಬಿಸನೆಸ್ಸೋ ಏನೋ..ಇಲ್ಲಿರೋ ಬಂಗಾರದಂತಾ ತೋಟ ಬಿಟ್ಟು.. ಮುಖ ಸಿಂಡಿಸಿರಿಕೊಂಡರು.. ಮಗನ ಮೇಲೆ.. ಎಷ್ಟೂಂತ ನಾವ್ ಹೇಳೋದು.. ಅವನ ಗೆಳೆಯರೆಲ್ಲಾ ಸೇರಿ ಅದೇನೋ ಚಟ್ಲಿ ಬಿಸನೆಸ್ ಮಾಡ್ತಾರಂತೆ.. ಬ್ರಾಹ್ಮಣರಿಗೆಲ್ಲಾ ಅದೆಲ್ಲಾ ಅಲ್ಲಾ.. ಹೇಳಿ ಗಿಳಿಗೆ ಹೇಳಿದಂಗೆ ಹೇಳ್ದೆ.. ಅಂವ ಎಲ್ಲಿ ಕೇಳ್ತಾ ನಂಗಳ ಮಾತು... ಮುಂದುವರಿಸಿದರು.
ಬಾಗಿಲ ಬಳಿ ಬಂದು ನಿಂತ ಶಾಂಭವಿ ಈಗ ನಮ್ಮತ್ತ ನೋಡಿದಳು.
ಇವಳೂ ಅಷ್ಟೆ.. ಅಣ್ಣನ ಹಾಗೆ ಹಠ.. ಕಾಲೇಜೆಲ್ಲಾ ಇವಳಿಗ್ಯಾಕೆ ಬೇಕಿತ್ತು.. ಅಂತ..
ಆಪ್ಪ..! ಶಾಂಭವಿ ಅಪ್ಪನ ಕಡೆ ಸುಮ್ಮನಿರುವಂತೆ ಸೂಚನೆ ಕೊಟ್ಟಳು..
ಕಾಲೇಜಿಗೆ ಹೋಗ್ತಾಳಾ.. ನಾನು ಬಾಯಿ ಬಿಟ್ಟೆ. ಹೌದು ಐ.ಟಿ.ಐ. ಮಾಡ್ತಾ ಇದೀನಿ ಅವಳೇ ಹೇಳಿದಳು. ಗುಡ್.. ಅಂತಂದೆ.
ಓ ದಿನೇಶನ ಕ್ಲಾಸ್ ಮೇಟಾ.. ಕೇಳಿದ್ದು ಪುರಿ ಈ ಸಲ.
ಹೌದೌದು ಆ ಹಾಳಾದವನ ಕ್ಲಾಸ್ಮೇಟೇ... ಉತ್ತರಿಸಿದ್ದು ಜೋಯಿಸರು.
ಹಾಂಗಂದ್ರೆ...? ಪುರಿ ಕೇಳಿದ.. ಅವನಿಗೂ ಅರ್ಥವಾದಂತಿರಲಿಲ್ಲ.
ಅದೇ .. ಆ ಇವಳ ಹಿಂದೆ ಬಿದ್ದಿದಾನಂತೆ.. ಕಾಲೇಜಿಗೆ ಹೋಗುವಾಗ ಬರುವಾಗ ಇವಳ ಹಿಂದೇ ನಾಯಿ ಥರಾ ಅಲಿತಾನಂತೆ... ನೋಡ್ದವರು ಏನೇನೋ ಮಾತಾಡ್ತಾರೆ.. ಇವಳಿಗೂ ಕಾಲೇಜ್ ಬಿಡು ಅಂದ್ರೆ ಕೇಳಲ್ಲ..
ಅಪ್ಪಾ.. ನಾನು ಕಾಲೇಜು ಬಿಡಲ್ಲ ಅಂದ್ರೆ ಬಿಡಲ್ಲ.. ದೃಢನಿರ್ಧಾರದೊಂದಿಗೆ ಒಳ ನಡೆದಳು ಶಾಂಭವಿ..
ನೀನೇನೆ ಅವ್ರಿಗೆ ಎದುರುತ್ತರ ಕೊಡೋದು.. ಅಂತ ಅವಳಮ್ಮನೂ ಅವಳ ಹಿಂದೆ ಒಳ ನಡೆದಳು.
ನಾವಿನ್ನು ಬರ್ತೇವೆ.. ನಾವೂ ಹೊರಟೆವು.. ಚಪ್ಪಲಿ ಹಾಕುತ್ತ ನಿಂತಿರುವಾಗ ನಮ್ಮ ಜೊತೆಗೇ ಬಂದ ಜೋಯಿಸರು ಪಿಸುಮಾತಿನಲ್ಲಿ ಮತ್ತೆ.. ಅದು ಈ ವಿಷಯ ನಿಮ್ಮಲ್ಲೇ ಇರಲಿ... ಆ ಪಾಂಡುಗೇನಾದ್ರೂ ಗೊತ್ತಾದ್ರೆ ಸುಮ್ಮನೆ ಕುಡಿದು ಗಲಾಟೆ ಮಾಡ್ತಾನೆ.. ಅದಕ್ಕೆ ಹೇಳ್ದೆ.. ಸುಮ್ಮನೆ ರಗಳೆ ಯಾಕೆ ಅಂತ.. ಹೇಳಿದ್ದು ನಾಟಕೀಯವಾಗಿತ್ತು.
ಫೋನ್ ಮಾಡಿದ್ರಲ್ಲ.. ಆರು ರುಪಾಯಿ ನಿನ್ನಪ್ಪನ ಹತ್ರ ಕೇಳ್ತೆ.. ಹೋಗ್ಬನ್ನಿ.. ಮತ್ತದೇ ಪೆಚ್ಚು ನಗೆ..
ಸಾರಿ ಮರ್ತೇ ಬಿಟ್ಟಿದ್ದೆ ತಗೊಳ್ಳಿ.. ಐದು ರೂಪಾಯಿ ನೋಟೊಂದು ಒಂದು ರೂಪಾಯಿ ನಾಣ್ಯವೊಂದನ್ನು ಜೋಯಿಸರ ಕೈಗಿಟ್ಟೆ.. ನಾವಿಬ್ಬರೂ ಹೊರಟೆವು.. ಕಟ್ಟಿರುವೆಗಳ ಸಾಲು ದಿಕ್ಕು ಬದಲಿಸಿತ್ತು..










ತಂತಿ ಬೇಲಿ

ದಾರಿಯುದ್ದಕ್ಕೂ ಮೌನ ಆವರಿಸಿತ್ತು..ಸುತ್ತಲಿನ ಪ್ರಕೃತಿ ಮೆಲ್ಲಗೆ ಮಾತಾಡುತ್ತಿತ್ತು... ಮನೆ ಅಷ್ಟೇನೂ ದೂರವಿರಲಿಲ್ಲ.ಆದರೆ ಭಾರವಾಗಿದ್ದ ಬ್ಯಾಗಿನಿಂದಾಗಿ ಹಾಗೂ ಮೌನದಿಂದಾಗಿ ದೂರವೆನಿಸಿತ್ತುನನಗೆ ಈ ರೀತಿ ಮೌನ ಸರಿಬೀಳುವುದಿಲ್ಲ...ನಾನು ಎಷ್ಟೋ ಬಾರಿ ಪ್ರಯತ್ನಿಸಿದ್ದೇನೆ ಮೌನವಾಗಿರಲು..ಹೆಚ್ಚೆಂದರೆ ಹತ್ತು ನಿಮಿಷ...ಅದಕ್ಕೂ ಹೆಚ್ಚು ಒಬ್ಬಂಟಿಯಾಗಿದ್ದರೂ ಬಾಯಿಂದ ಹಾಡೋ ಕವನವೋ ಹೊರಬರುವುದಂತೂ ಗ್ಯಾರಂಟಿ..ಆದ್ರೆ ಈ ಪುರಿ ಹಾಗೂ ಅವನಪ್ಪ ಸುಮ್ಮನೆ ಇದೇ ಮೊದಲ ಬಾರಿಗೆ ನೋಡಿದವರಂತೆ ದಾರಿ ನೋಡುತ್ತಾ ಹೋಗುತ್ತಿದ್ದಾರೆ...
ಅಂತೂ ಮನೆ ಬಂತು...ಮನೆ ದೊಡ್ಡದೇ...ಸುತ್ತಲಿನ ಹಸಿರು ಪರಿಸರದಲ್ಲಿ ಕೆಂಪನೆ ಹಂಚಿನ ಮನೆ ಕಣ್ಣಿಗೆ ಮುದ ನೀಡುತ್ತಿತ್ತು.ನಮ್ಮ ಸಿಟಿಗಳಲ್ಲಾದರೆ ಕಾಂಪೌಂಡ್ ಕಟ್ಟಿ ಮನೆಯನ್ನೂ ಮನಸನ್ನೂ ಸೀಮಿತಗೊಳಿಸಿಕೊಂಡುಬಿಡುತ್ತೇವೆ...ಆದರೆ ಪುರಿಯ ಮನೆ ಹಾಗಲ್ಲ....ನನಗದು ವಿಶಾಲತೆಯ ಸಂಕೇತವೆನಿಸಿತು..ಎರಡಂತಸ್ತಿನ ಭರ್ಜರಿ ಮನೆ....ದೊಡ್ಡ ಅಂಗಳ...ಇಡೀ ಅಂಗಳಕ್ಕೆ ಅಡಿಕೆ ಮರದ ದಬ್ಬೆಗಳಿಂದ ಮಾಡಿದ ಚಪ್ಪರ...ನನಗೂ ಗೊತ್ತಿರಲಿಲ್ಲ..ನಮ್ಮೂರಿನಲ್ಲಿ ಹಾಕುವ ಪೆಂಡಾಲ್ಗಳ ಪರಿಚಯವಿದೆ..ಆದರೆ ಇದೇನಿದು...ಮನೆಯ ಅಂಗಲಕ್ಕೆ ಕಾಲಿರಿಸುವ ಮುಂಚೆಯೆು ಪುರಿಯನ್ನು ಕೇಳಿದೆ...ಏನೋ ಇದು...ಪರಿಸರವಾದಿಗಳು ವಿಚಿತ್ರ ಪೆಂಡಾಲ್ ವ್ಯವಸ್ಥೆ ಮಾಡಿದ್ದಾರೆ..ನಮ್ಮ ಸ್ವಾಗತಕ್ಕೆ... ಲೇ ಇದು ಪೆಂಡಾಲ್ ಅಲ್ವೋ..ಅಡಿಕೆ ಒಣಗಿಸಲು ಮಾಡಿದ ಅಟ್ಟಣಿಗೆ... ಹತ್ತಿರ ಬರುತ್ತಿದ್ದಂತೆ ಸ್ಪಷ್ಟವಾಯಿತು..ಅಡಿಕೆ ಮರವನ್ನು ಸೀಳಿ ಚಪ್ಪರದಂತೆ ಹಾಸಿದ್ದರು...ಅದಕ್ಕೆ ಕಂಬವೂ ಅಡಿಕೆಮರದ್ದೇ...ಏನಿದು ಜನ ಪಾಪದ ಅಡಿಕೆಮರವನ್ನು ಈ ರೀತಿ ದುಡಿಸಿಕೊಳ್ಳುತ್ತಿದ್ದಾರೆ ಅನ್ನಿಸಿತು.

ನಾನು ಮನೆಗೆ ಹೊಸಬನಾಗಿದ್ದರಿಂದ ಎಲ್ಲರಿಗಿಂತ ಹಿಂದಿದ್ದೆವೆಂಕಟರಮಣ ಭಾಗವತರು ದಡ ದಡನೆ ನಡೆದು ಬಂದು ಒಳ ಪ್ರವೇಶಿಸಿದರು...ಪುರಿ ನನ್ನ ಕಷ್ಟನೋಡುತ್ತಾ ಬಾಗಿಲ ಬಳಿ ನಿಂತಿದ್ದ. ಶೂ ಕಳಚಿಟ್ಟು ಕಲ್ತೊಳೆಯುವ ನೀರಿಗಾಗಿ ಅರಸಿದೆ...ಪುರಿ ಅಂಗಳದ ಆ ತುದಿಯಲ್ಲಿದ್ದ ಡ್ರಮ್ ಒಂದನ್ನು ತೋರಿಸಿದ...ಶೂ ಹಾಕಿದ್ದರಿಂದ ಕಾಲೇನೂ ಕೊಳೆಯಾಗಿರಲಿಲ್ಲ..ಶಾಸ್ತ್ರಕ್ಕೆಂದು ನೀರು ಹಾಕಿಕೊಂಡು ಒಳ ಹೊಕ್ಕೆ...

ಬಂದು ಎರಡು ನಿಮಿಷವಾದರೂ ಯಾರೂ ಕಾಣಿಸಲಿಲ್ಲ...ಭಾಗವತರು ಒಳಗಡೆ ಯಾವುದೋ ಹಳೇ ಡೈರಿ ಹಿಡಿದುಕೊಂಡು ಏನೋ ಹುಡುಕುತ್ತಿದ್ದರು..ಪುರಿಯನ್ನು ಕೇಳಿದೆ ... ಅಜ್ಜಿ ಎಲ್ಲೋ..? ಪುರಿಯ ಅಮ್ಮನಿಲ್ಲದ ವಿಚಾರ ಗೊತ್ತಿತ್ತು. ಪುರಿಗೆ ಅವನಮ್ಮನನ್ನು ನೋಡಿದ ನೆನಪೂ ಇರಲಿಲ್ಲ. ಇಲ್ಲೇ ಎಲ್ಲೋ ಇರಬೇಕೋ...ನೋಡುತ್ತೇನೆ ತಡಿ... ಅಮ್ಮಮ್ಮಾ... ಕರೆಯುತ್ತಾ ಎದ್ದು ಒಳಮನೆಗೆ ನಡೆದ....ನಾನಿಲ್ಲಿ ಒಬ್ಬಂಟಿ..ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ.. ಹಳೇ ಮನೆ..ಆದರೂ ಅಷ್ಟೋಂದು ಹಳೆಯದಲ್ಲ..ಗೋಡೆಯ ಮಸುಕು ಬಿಳಿ ಬಣ್ಣ ಸುಮಾರು ಮೂರು ವರ್ಷದಷ್ಟು ಹಳೆಯದಿರಬಹುದು....ಗೋಡೆಯ ಆ ಮೂಲೆಯಲ್ಲಿ ಉದ್ದದ ಕೊಂಬಿರುವ ಕಡವೆಯ ಮುಖ..ಅದಕ್ಕೆ ತೂಗುಹಾಕಿರುವ ಒಂದು ಶರ್ಟ್ ಮತ್ತು ಒಂದು ಕೈಚೀಲ...ಪಕ್ಕದಲ್ಲೇ ಹಾರ ಹಾಕಿದ ಪುರಿಯ ಅಮ್ಮನ ಫೋಟೋ...ನನ್ನ ಕಣ್ಣು ಮನೆಯನ್ನೆಲ್ಲಾ ಪರೀಕ್ಷಿಸಿತು.

ಭಾಗವತರು ಹೊರಬಂದರು..ಡೈರಿ ಸಮೇತ.. ಎದ್ದು ನಿಲ್ಲಬೇಕೋ ಕುಳಿತೇ ಇರಬೇಕೋ ಎಂಬ ಗೊಂದಲದಲ್ಲಿರುವಾಗಲೇ ಹೊರ ನಡೆದರು...ನನೊಬ್ಬ ಇದ್ದುದನ್ನು ಗಮನಿಸದೇ...ಹಂದಿಯ ವಿಚಾರ ಇನ್ನೂ ಮುಗಿದಿಲ್ಲ ಅಂದುಕೊಂಡೆ...ಅಷ್ಟರಲ್ಲೇ ಅಜ್ಜಿ ಮೊಮ್ಮಗ ಹೊರಬಂದರು... ಅಮ್ಮಮ್ಮ ಇಂವ ನನ್ನ ಫ್ರೆಂಡ್.. ಪುರಿಯಿಂದ ನನ್ನ ಪರಿಚಯ..ನಾನು ಹೋಗಿ ಕಾಲಿಗೆ ಬಿದ್ದೆ....ಅಮ್ಮಮ್ಮ ನಾನಂದುಕೊಂಡಷ್ಟು ಮುದುಕಿಯಲ್ಲ...ತಲೆಗೂದಲೆಲ್ಲಾ ಹಣ್ಣಾಗಿದ್ದವು...ಚರ್ಮ ಅಲ್ಲಲ್ಲಿ ಸುಕ್ಕುಗಟ್ಟಿತ್ತು..ಆದರೆ ಕಣ್ಣುಗಳಲ್ಲಿನ ಚೈತನ್ಯ ಕುಂದಿರಲಿಲ್ಲ... ಯಾವ ಜಾತಿ?... ಕೇಳಿಯೆು ಬಿಟ್ಟರು...ಪುರಿ ಮೊದಲೇ ಹೇಳಿದ್ದ ..ಈ ಪ್ರಶ್ನೆ ಕೇಳಿಯೆು ಕೇಳುತ್ತಾರೆಂದು... ನಮ್ದೇ. ಅಮ್ಮಮ್ಮ.. ಪುರಿ ಉತ್ತರಿಸಿದ.
ಅದು ಸಹಜ. ಅದಕ್ಕೇ ಜನರೇಷನ್ ಗ್ಯಾಪ್ ಅನ್ನೋದು...ನನಗೇನೂ ಬೇಸರವಾಗಲಿಲ್ಲ..ತಾವು ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಂತ ಮಡಿ-ಮೈಲಿಗೆಯನ್ನು ತನ್ನ ಕುಟುಂಬದ ಮರಿಯೊಂದು ನಾಶಮಾಡುವುದು ಯಾರಿಗೂ ಇಷ್ಟವಾಗಲ್ಲ.ಅವರ ಸಮಾಧಾನಕ್ಕೆ ನಾವು ಹೊಂದಿಕೊಂಡು ಹೋದರೆ ನಮಗೂ ನಷ್ಟವೇನಿಲ್ಲ....ತತ್ತ್ವಜ್ಞಾನಿಯಂತೆ ಯೋಚಿಸತೊಡಗಿದೆ...ನನ್ನ ಮನಸ್ಸಿನಲ್ಲಿರುವ ಎಲ್ಲಾ ಯೋಚನೆಗಳೂ ಬೇರೆ ಯಾರಿಗಾದರೂ ಗೊತ್ತಾಗುವಂತಿದ್ದರೆ ಅವರು ನನಗೆ ಮಾಸ್ಟರ್ ಆಫ್ ಫಿಲಾಸಫಿ ಕೊಡಿಸುತ್ತಿದ್ದರು...ಇರಲಿ ಅಂತ ಭಾಗ್ಯ ನನಗಿಲ್ಲ...

ನಾನೂ ಅಜ್ಜಿಯನ್ನು ಪುರಿಯಂತೆ ಅಮ್ಮಮ್ಮ ಎಂದು ಕರೆಯಲು ನಿರ್ಧರಿಸಿದೆ.. ಒಲೆ ಮೇಲೆ ನೀರಿಟ್ಟು ಬರ್ತೇನೆ..ಅವಲಕ್ಕಿ ಕಲ್ಸಾಗಿದೆ..ವೆಂಟ್ರಣ ಬರ್ಲಿ ಎಲ್ಲರೂ ಚಾ ಕುಡ್ಯೋಣ ಅನ್ನುತ್ತಾ ಅಜ್ಜಿ ಅಲ್ಲ ಅಮ್ಮಮ್ಮ ಒಳಗೆ ಹೋದರು...ಹೌದು ಈ ಭಾಗವತರು ಎಲ್ಲಿಗೆ ಹೋದರು...ಆಲೋಚನೆಗೆ ದಾರಿಮಾಡಿಕೊಡದೆ ಪುರಿಯೆು ಹೇಳಿದ... ಅಪ್ಪ ಇಲ್ಲೇ ಫೋನ್ ಮಾಡಿ ಬರಲು ಹೋಗಿದ್ದಾರೆ..ಆ ಪಾಂಡುಗೆ..ಎಲ್ಲಾ ಆ ಹಂದಿಯಿಂದ ಇದೇನಿದು ..ಈ ಪುರಿ ನನಗೆ ಎಲ್ಲಾ ಗೊತ್ತಿರುವಂತೆ ಹೇಳ್ತಾ ಇದ್ದಾನಲ್ಲಾ..ನನಗೇನು ಗೊತ್ತಿರಬೇಕು ..ಯಾವ ಪಾಂಡುನೋ ಎನೋ..ಈ ಹಂದಿ ನಿಜವಾಗಲೂ ಅಪ್ಪ ಮಗನ ತಲೆ ಕೆಡಿಸಿದೆ ಅಂದುಕೊಂಡೆ..

ಗಂಟೆ ಎಂಟೂವರೆ. ವೆಂಕಟರಮಣ ಭಾಗವತರ ಪತ್ತೆ ಇಲ್ಲ.ಪುರಿಯನ್ನು ಕೇಳಿದೆ.. ಎಲ್ಲೋ ನಿಮ್ಮಪ್ಪ..ಏನ್ ಫೋನ್ ಮಾಡಕ್ಕೋಗಿದಾರೋ ಇಲ್ಲಾ... ಇಲ್ಲೇ ಪಕ್ಕದಲ್ಲಿ ದೇವಸ್ಥಾನದ ಜೋಯಿಸರ ಮನೆಯಲ್ಲಿ ಫೋನಿದೆ...ಇನ್ನೇನ್ ಬಂದ್ಬಿಡ್ತಾನೆ.. ಅಡುಗೆ ಮನೆಯಿಂದಲೇ ಅಮ್ಮಮ್ಮ ಹೇಳಿದ್ದು. ಅಷ್ಟರಲ್ಲೇ ಭಾಗವತರ ಆಗಮನ. ಆದರೆ ಈಗ ನಡಿಗೆ ನಿಧಾನವಾಗಿತ್ತು..ಅಷ್ಟೊಂದು ಬಿರುಸಿರಲಿಲ್ಲ..ಒಳಗೆ ಬಂದವರೇ ಫ್ಯಾನ್ ಸ್ವಿಚ್ ಅದುಮಿದರು... ತಥ್..ಹಾಳಾದ ಕರೆಂಟು... ಕರ್ನಾಟಕಕ್ಕೆ ಕರೆಂಟ್ ಕೊಡುವ ಜೋಗ್ ಜಲಪಾತಕ್ಕೆ ಕಾರಣವಾದ ಶರಾವತಿ ನಾಡಿನಲ್ಲಿ ಕರೆಂಟ್ ಇಲ್ಲ. ಯಾವೂರು...? ನನಗೆ ಮೊದಲ ಪ್ರಶ್ನೆ.

ಬೆಂಗಳೂರು ಅಂಕಲ್... ನಿಮ್ಮ ಮಗನ ಕ್ಲಾಸ್ಮೇಟ್..

ನಿಮ್ಮಪ್ಪಾಮ್ಮ..

ಅವರೂ ಬೆಂಗಳೂರೇ.. ಆದರೆ ಅವರ ಪ್ರಷ್ನೆ ಅದಲ್ಲವಾಗಿತ್ತು..ಹೀಗಾಗಿ ನಾನೇ ಮುಂದುವರಿಸಿದೆ. ಅಪ್ಪ ಬ್ಯಾಂಕ್ನಲ್ಲಿ ಇದ್ದಾರೆ. ಅಮ್ಮ ಟೀಚರ್..

ಯಾವ್ ಬ್ಯಾಂಕು?

ಇಂಡಿಯನ್ ಬ್ಯಾಂಕ್...ಫೈನಾನ್ಸ್ ಮ್ಯಾನೇಜರ್..

ನಮ್ಮೂರಲ್ಲಿ ಆ ಬ್ಯಾಂಕ್ ಇಲ್ಲ..ಕೆನರಾ ಒಂದೇ..

ಹೌದಂಕಲ್.. ಆ ಬ್ಯಾಂಕ್ ಜಾಸ್ತಿ ಡಿವಿಶನ್ಸ್ ಇಲ್ಲಾ.. ಬೆಂಗಳೂರಲ್ಲೇ ಇರೋದು ಮೂರ್ನಾಲ್ಕು... ಸುಮ್ಮನೆ ಮಾತಾಡಬೇಕೆಂದು ಆಡಿದ್ದಷ್ಟೆ.

ಪುರಿ ಹೇಳತೊಡಗಿದ.. ಅಪ್ಪಾ ಇವ್ನು ಬೆಂಗಳೂರಲ್ಲೇ ಶಾಲೆ ಕಲಿತದ್ದು...ಎಲ್.ಕೆ.ಜಿ.ಯಿಂದ ಇಲ್ಲಿವರೆಗೂ..ಬೆಂಗಳೂರಲ್ಲಿ ಮನೆ ಇದ್ರೂ ನಮ್ ಹಾಸ್ಟೆಲ್ನಲ್ಲೇ ಇರೋದು...ಬೆಂಗಳೂರ್ನಲ್ಲಿ ದಿನಾ ಓಡಾಟ ಕಷ್ಟ ಅಂತ ಹಾಸ್ಟೆಲ್ ಸೇರ್ಕೊಂಡ..ಆದ್ರೆ ವಾರಕ್ಕೆ ಎರಡು ಸಲ ಮನೆಗೆ ಹೋಗಿ ಬರ್ತಿರ್ತಾ...ಎಕ್ಸಾಮ್ ಮುಗಿತಲ್ಲ..ಅದಕ್ಕೆ ಇಲ್ಲಿಗೆ ಕರ್ಕೊಂಡ್ ಬಂದೆ..

ಒಳ್ಳೆದಾತು..ಇಲ್ಲಿ ಸುಮಾರು ಒಳ್ಳೊಳ್ಳೆ ಜಾಗ ಇದೆ..ಎಲ್ಲೇ ನಾಲ್ಕೈದು ದಿನ ಇದ್ದು ಎಲ್ಲಾ ನೋಡ್ಕೊಂಡ್ ಹೋಗು...

ಇದೇನಿದು ಹದಿನೈದು ದಿನಗಳ ಕ್ಯಾಂಪ್ ಹಾಕುವಾ ಅಂತ ಬಂದ್ರೆ ಇವರು ನಾಲ್ಕೈದು ದಿನ ಅಂತಿದಾರೆ..ಈ ಪುರಿ ಏನೂ ಹೇಳಿಲ್ಲಾ ಅನ್ಸುತ್ತೆ..

ಅಪ್ಪಾ ಇವ್ನು ಇನ್ನು ಹದಿನೈದು ದಿನ ಇಲ್ಲೇ ಇರ್ತಾನೆ.. ಇವ್ನಿಗೆ ಯಕ್ಷಗಾನ ನೋಡ್ಬೇಕಂತೆ..

ಓ.....ಸರಿ. ಇವತ್ತು ಮನೆಲ್ಲೇ ಇರಿ..ನಾಳೆ ಹೊರಡಿ..ಊರು ಸುತ್ಲಿಕ್ಕೆ..ಈಗ ಪಾಂಡು ಬರ್ತಾನೆ...ಅದೇನೋ ಶಾರ್ಟ್ ಆಗಿ ಆ ತಂತಿ ಬೇಲಿ ಸುಟ್ ಹೋಗಿದ್ಯಂತೆ..ಅದನ್ನೊಂದ್ ಸರಿ ಮಾಡ್ ಹೋಗ್ತೀನಿ ಅಂತ ಫೋನ್ನಲ್ಲಿ ಅಂದ..

ಭಾಗವತರು ಮಾತಿಗೆ ಪೂರ್ಣವಿರಾಮ ಇಟ್ಟರು. ನನಗರ್ಥವಾಗದ್ದು ಒಂದೇ 'ಈ ಪಾಂಡು ಯಾರು?'ಅಡಿಗೆ ಮನೆಯಲ್ಲಿನ ಶಬ್ದಕ್ಕಿಂತ ನನ್ನ ಹೊಟ್ಟೆಯಲ್ಲಿ ಇಲಿಗಳು ಕುಟ್ಟುತ್ತಿದ್ದ ತಾಳದ ಶಬ್ದವೇ ದೊಡ್ಡದಾಗಿತ್ತುಆದರೆ ಯಾರಿಗೂ ಕೇಳುತ್ತಿರಲಿಲ್ಲ.ಭಾಗವತರು ಆರಾಮ ಕುರ್ಚಿಯಲ್ಲಿ ಆರಾಮಾಗಿ ಕುಳಿತಿದ್ದು ನೋಡಿದರೆ ಏಳುವ ಆಲೋಚನೆಯೇ ಇದ್ದಂತಿರಲಿಲ್ಲ.. ಪುರಿ ಸೂರ್ಯಪುತ್ರ..ಅವನಿಗೆ ಹಸಿವಾಗುವ ಹೊತ್ತಿಗೆ ಮಧ್ಯಾಹ್ನವಾಗಿರುತ್ತದೆ.

ನನ್ನ ಕರೆಗೆ ಓಗೊಟ್ಟಂತೆ ಅಮ್ಮಮ್ಮ ಒಳಗಿನಿಂದಲೇ ಕರೆದಳು... ವೆಂಟ್ರಣ...ಎಲ್ಲಾ ಬನ್ನಿ..ತಿಂಡಿಗಾತು..
ಬನ್ನಿ.. ಭಾಗವತರು ಎದ್ದು ನಡೆದರು. ಹಿಂಬಾಲಿಸಿ ನಾವು...ಒಳಗಡೆ ಅವಲಕ್ಕಿ,ಚಾ ಸಿದ್ಧವಾಗಿತ್ತು..ಆಗಲೂ ಮೌನ...ಯಾರೂ ಮಾತಾಡುವಂತೆಯೆು ಕಾಣಲಿಲ್ಲ..ನಾನೇ ಪ್ರಾರಂಭಿಸಿದೆ...

ಅಮ್ಮಮ್ಮಾ.. ತಿಂಡಿ ಬಹಳ ಚೆನ್ನಾಗಿದೆ...ಅವಲಕ್ಕಿಗೆ ಹಾಕಿದ ಒಗ್ಗರಣೆ ಪರಿಮಳ ನನಗೆ ಬಹಳ ಇಷ್ಟ...

ನಿಂಗೆ ಇನ್ನೊಂದ್ ಸ್ವಲ್ಪ ಹಾಕ್ಲಾ?..ಸಂಕೋಚ ಮಾಡ್ಕೋಬೇಡ..ಹೊಟ್ಟೆ ತುಂಬಾ ತಿನ್ನು...ನಮ್ಮನೆ ಪುರುಷೋತ್ತಮಂಗೆ ಇಷ್ಟು ಬೇಗ ಹಸಿವಾಗಲ್ಲ..ಅಂವ ಬೆಳಿಗ್ಗೆ ಏಳೋದೇ ಎಂಟ್ ಗಂಟೆಗೆ..

ಹಾಸ್ಟೆಲ್ನಲ್ಲೂ ಅಷ್ಟೆ ಅಮ್ಮಮ್ಮಾ.. ದಿನಾ ತಿಂಡಿಗೆ ಹೋಗುವಾಗ ಕಾಲೇಜ್ ಬೆಲ್ ಹೊಡೆದಿಡ್ತಾರೆ...

ಅದನ್ನೇ ನಾನ್ ಹೇಳೋದು..ಈ ವಯಸ್ಸಿನಲ್ಲಿ ಈ ರೀತಿ ಆದ್ರೆ...ಮುಂದೆ ಏನಾದ್ರೂ ರೋಗ ಗೀಗ ಬಂದ್ರೆ ಅಂತ... ಅಮ್ಮಮ್ಮನ ಮಾತಿನಲ್ಲಿ ಇದ್ದೊಬ್ಬ ಮೊಮ್ಮಗನ ಬಗ್ಗೆ ಕಾಳಜಿ ಎದ್ದು ತೋರುತ್ತಿತ್ತು..

ಅಮ್ಮಮ್ಮಾ ಸಾಕು ನನ್ ವಿಷಯ...ಬೇರೆ ಏನಾದ್ರೂ ಇದ್ರೆ ಹೇಳು.. ಪುರಿ ಹುಸಿಮುನಿಸು ತೋರಿಸಿದ.
ಭಾಗವತರು ತಮ್ಮಷ್ಟಕ್ಕೆ ತಾವು ಚಾ ಕುಡಿಯುತ್ತಲಿದ್ದರು..ನಾನು ಅವರ ಮುಖ ಪದೇ ಪದೇ ಗಮನಿಸುತ್ತಿದ್ದನ್ನು ನೋಡಿದ ಅಮ್ಮಮ್ಮ ನಮ್ಮನೆ ವೆಂಟ್ರಣಂಗೆ ಹಂದಿದೇ ಚಿಂತೆ... ಅಲ್ಲೊಂದ್ಕಡೆ ತಂತಿ ಬೇಲಿ ಕೂಡಾ ಸುಟ್ಟೋಯ್ತು...ಈ ಪುರುಷೋತ್ತಮ ಇಂಜಿನಿಯರ್ ಹೇಳಿ ಹೆಸರಿಗಷ್ಟೆ...ತಂತಿ ಬೇಲಿ ಸುಟ್ಟೋದದ್ದನ್ನ ಸರಿ ಮಾಡೋದ್ ಬಿಡುಒಂದ್ ಸುಟ್ಟೋದ್ ಬಲ್ಬ್ ಬೇರೆ ಹಾಕಲಿಕ್ಕೆ ಹೆದರಿ ಸಾಯ್ತಾ.. ಅಂದ್ರು..

ಅಮ್ಮಮ್ಮಾ ಇವನೂ ಇಂಜಿನಿಯರ್ರೇ.. ಕ್ಲಾಸ್ನಲ್ಲಿ ನನಗಿಂತ ಹೆಚ್ಚು ಮಾರ್ಕ್ಸ್ ಬಂದಿದೆ

ಈ ಮಾತನ್ನು ಹೇಳಿ ಪುರಿ ಅವನಿಗಿಂತ ಹೆಚ್ಚು ಮಾರ್ಕ್ಸ್ ತಗೆದ್ದಿದ್ದಕ್ಕೆ ಇದ್ದ ಸೇಡು ತೀರಿಸಿಕೊಂಡ..ಇಲ್ಲದಿದ್ದರೆ ನನಗ್ಯಾಕೆ ತಂತಿ ಬೇಲಿ ರಿಪೇರಿ ಮಾಡುವ ಕೆಲಸವನ್ನ ಈ ರೀತಿ ಹೇಳ್ತಿದ್ದ?..ಇಂಜಿನಿಯರಿಂಗ್ನಲ್ಲಿ ಜಾಸ್ತಿ ಮಾರ್ಕ್ಸ್ ಬರುವದೇ ಹೊರತು ಅದನ್ನು ತಗೆಯಲಾಗುವುದಿಲ್ಲ... ವಿಷಯ ಅಮ್ಮಮ್ಮನಿಗೆಲ್ಲಿ ಅರ್ಥವಾಗಬೇಕು ಹೇಳಿ..ಅವರು ನನಗೆ ತಂತಿ ಬೇಲಿ ರಿಪೇರಿ ಮಾಡಲು ಬರುತ್ತದೆ ಎಂದು ನಂಬಿದರು...

ನೋಡೋ ವೆಂಟ್ರಣ ಪಾಂಡು ಜೊತೆಗೆ ಇವರನ್ನೂ ತೋಟಕ್ಕೆ ಕರ್ಕೊಂಡ್ ಹೋಗು..ಇಂಜಿನಿಯರ್ಗಳ ತಲೆ ಎಲ್ಲಿಯವರೆಗೆ ಓಡುತ್ತೆ ನೋಡಿಯೆು ಬಿಡೋಣ... ತಮಾಷೆ ಮಾಡುತ್ತಾ ಅಮ್ಮಮ್ಮ ಹಿತ್ತಲ ಕಡೆಗೆ ಹೋದರು... ಈ ಪಾಂಡು ಯಾರು ಅಂತ ಕೇಳೋಣ ಅಂದ್ಕೊಂಡೆ..ಅಷ್ಟರಲ್ಲಿ ಹೊರಗಡೆ ಯಾರೋ ಮೆಟ್ಟಿಲಿಳಿದು ಬರುವ ಶಬ್ದವಾಯಿತು..ಭಾಗವತರು ಅವಸರವಸರವಾಗಿ ತಿಂದು ಹೊರನಡೆದರು...

ಓ ದಿನೇಶ.. ಎಲ್ಲೋ ದಾದ ಬರಲಿಲ್ವಾ..? ಅಮ್ಮಮ್ಮ ಕೇಳುತ್ತಲೇ ಹಿತ್ತಲಿನಿಂದ ಅಂಗಳಕ್ಕೆ ಬಂದರು...ಮನೆಯ ರಚನೆಯೆು ಹಾಗಿತ್ತು...ಹಿತ್ತಲಿನಿಂದ ಮೆಟ್ಟಿಲು ಸ್ಪಷ್ಟವಾಗಿ ಕಾಣುತ್ತಿತ್ತು.. ಅದಲ್ಲದೇ ಹಿತ್ತಲಿನಿಂದಲೇ ನೇರವಾಗಿ ಅಂಗಳಕ್ಕೆ ಹಾದು ಬರಲು ಸಣ್ಣ ದಾರಿಯಿತ್ತು.. ಆಮೇಲೆ ಅರ್ಥವಾಗಿದ್ದು ಕೆಲಸದವರು ಮನೆ ಪ್ರವೇಶಿಸದಂತೆ ಹಿತ್ತಲ ಕಡೆಗೆ ಹೋಗಲು ನೇರವಾದ ಮಾರ್ಗ ಅದು..ಹಳ್ಳಿಗಳಲ್ಲಿ ತಾವು ಮೆಲು ಜಾತಿ ಎಂದು ತಿಳಿದ ಜನ ಅವರೇ ಅಂದುಕೊಂಡ ಕೀಳು ಜಾತಿಯವರಿಗೆ ದಾರಿ ತೋರಿಸುವ ವಿಧಾನ ಅದು...ಅದ್ಸರಿ ಈ ದಿನೇಶ ಯಾರು..?


ಪುರಿಯನ್ನು ಕೇಳಿದೆ... ಪಾಂಡು ಮಗ..

ಅಯ್ಯೋ ಈ ಪಾಂಡು ಯಾರಪ್ಪಾ...?

ಅದೇ ಕಣೋ...ಎಲೆಕ್ಟ್ರಿಶಿಯನ್ನು..ತಂತಿ ಬೇಲಿ ರಿಪೇರಿ...ಹಂದಿ..

ಅಬ್ಬಬ್ಬಾ ಈಗ ಅರ್ಥವಾಯ್ತು.. ಪಾಂಡು ಮಗ ದಿನೇಶ.. ನೋಡಲಿಕ್ಕೆ ಸ್ವಲ್ಪ ಕಪ್ಪು..ಧೋನಿ ತರ ಕೂದಲು ಬಿಟ್ಟಿದ್ದ..ಕಾಲೇಜಿಗೆ ಹೋಗೋ ತರ ಕಾಣ್ತಿದ್ದ... ಕಣ್ಣ ಪಕ್ಕದಲ್ಲಿದ್ದ ಸುಟ್ಟಿದ ಕಲೆ ಸ್ವಲ್ಪ ವಿಚಿತ್ರವಾಗಿ ಕಾಣುವಂತೆ ಮಾಡಿತ್ತು..ಅದಷ್ಟು ಬಿಟ್ಟರೆ ನೋಡಲು ಸುಂದರವಾಗೇ ಇದ್ದ..ಇರಲಿ ಅವನು ಹೇಗಿದ್ದರೆ ನನಗ್ಯಾಕೆ..ಇವನು ಯಾಕೆ ಬಂದ..ಪಾಂಡುಗೆ ಏನೋ ಆಗಿ ಮಗನನ್ನ ಕಳಿಸಿರಬೇಕು...ಇವನಿಗೂ ರಿಪೇರಿ ಕೆಲಸ ಬರುತ್ತೋ ಇಲ್ಲ ಸುಮ್ಮನೆ ವಿಷಯ ತಿಳಿಸೋಣ ಅಂತ ಬಂದ್ನೋ...ಇಲ್ಲ ರಿಪೇರಿ ಮಾಡಬಹುದು.. ಸುಮ್ಮನೆ ವಿಷಯವಾದ್ರೆ ಫೋನ್ನಲ್ಲೇ ಹೇಳ್ಬೋದಿತ್ತು...

ನನ್ನ ಊಹೆ ನಿಜವಾಗಿತ್ತು.. ದಿನೇಶ ಐ.ಟಿ.ಐ ಮಾಡ್ತಿದ್ದಾನೆ..ಇಂತ ರಿಪೇರಿ ವಿಷಯದಲ್ಲಿ ಎತ್ತಿದ ಕೈ.. ಪುರಿಯಂದ ಪರಿಚಯವಾಯಿತು..ಭಾಗವತರು ಒಂದು ಕತ್ತಿ ಹಿಡಿದು ದಿನೇಶನ ಜೊತೆ ತೋಟಕ್ಕೆ ನಡೆದರು.. ಇವನಪ್ಪನಿಗೆ ಬೀಡಿ ಸಹವಾಸ ಬಿಡು ಅಂತ ಹೇಳಿ ಹೇಳಿ ಸಾಕಾಯ್ತು..ನೋಡು ಹೀಗೆ ಆಗೋದು..ಇವತ್ತು ಶ್ವಾಸ ಕಟ್ಟಿದ ಹಾಗಾಯ್ತು ಅಂತಿದ್ದಿ...ನಾಳೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ... ಹಿತ್ತಲ ಕಡೆಗೆ ಪುನಃ ಹೊರಟಿದ್ದ ಅಮ್ಮಮ್ಮನ ಮುಂದಿನ ಮಾತುಗಳು ಅಸ್ಪಷ್ಟವಾಗಿದ್ದವು..ಹಳ್ಳಿಗರಲ್ಲಿ ಯಾರಿಗೆ ಏನಾದರೂ ಎಲ್ಲರಿಗೂ ಚಿಂತೆ...

ಅಪ್ಪಾ ನಾವೂ ಬರ್ತೀವಿ.. ಪುರಿ ಬೇರೆ ಯಾವುದೋ ಒಂದು ಚಪ್ಪಲಿ ತಂದ..ಅವನ ಹರಿದು ಹೋದ ಚಪ್ಪಲಿ ಅಂಗಳದ ತುದಿಯಲ್ಲಿ ಇರುವೆಗಳಿಗೆ ಆಹಾರವಾಗುತ್ತಿತ್ತು... ನಿನ್ನ ಶೂ ಎತ್ತಿ ಬೇರೆ ಎಲ್ಲಾದರೂ ಇಡೋ..ಇರುವೆಗಳು ನಿನ್ನ ಸಾಕ್ಸ್ನ ಪರಿಮಳಕ್ಕೆ ಮನಸೋತು ತಿಂದು ಹಾಕಿದರೆ ಮತ್ತೆ ನೀ ಬರಿ ಕಾಲಲ್ಲಿ ತಿರುಗಬೇಕು ನೋಡು.... ಅಯ್ಯೋ ಇದೊಂದು ಗ್ರಹಚಾರವಾಯ್ತುಲ್ಲ... ನಾ ಈ ಊರನ್ನೆಲ್ಲಾ ಶೂ ಹಾಕಿಕೊಂಡು ಸುತ್ತಬೇಕೆ..? ದೇವಸ್ಥಾನಕ್ಕೂ ಇದೇ ಶೂ..ತೋಟಕ್ಕೂ ಇದೇ ಶೂ..? ಪುರಿ..ಹೇಗಾದ್ರೂ ಒಂದ್ ಚಪ್ಪಲಿ ಅರೇಂಜ್ ಮಾಡೋ... ಇಲ್ಲೆಲ್ಲಾ ಶೂ ಹಾಕೊಂಡ್ ಓಡಾಡಲ್ಲ ನಾನು...

ಸರಿ ..ಅತಿಥಿ ದೇವೋ ಭವ.. ಅಂತ ಮತ್ತೊಂದ್ ಚಪ್ಪಲಿ ಜೊತೆ ತಂದ...ಅದನ್ ಹಾಕ್ಕೊಂಡು ಹೊರಟ್ವಿ ತೋಟದ ಕಡೆಗೆ..ಅದೇ ದಾರಿ.. ದೇವಸ್ಥಾನದ ಹತ್ತಿರವೇ ಇತ್ತು ತೋಟ..ಅಲ್ಲೇ ಹಂದಿ ಬಿದ್ದದ್ದು...ಈಗ ದೇವಸ್ಥಾನದ ಹತ್ತಿರ ಯಾರೂ ಇರಲಿಲ್ಲ... ಹಂದಿಯೂ ಸಹ... ಹಂದಿಯನ್ನ ಸಾಬ್ರು ತಗೊಂಡ್ ಹೋದ್ರಂತೆ..
ಪುರಿ ನನ್ನ ಮನವರಿತಂತೆ ಮೌನಕ್ಕೆ ಉತ್ತರಿಸಿದ..

ಅಲ್ವೋ ನಿಮ್ಮೂರಲ್ಲಿ ಜಾತಿ ಜಾತಿ ಅಂತ ಇಷ್ಟೆಲ್ಲಾ ಅಂತಾರಲ್ಲ... ಯಾರೂ ಇದರ ವಿರುದ್ಧ ಮಾತಾಡಲ್ವಾ..?

ಯಾರೋ ಮಾತಾಡ್ತಾರೆ... ಎಲ್ಲರಿಗೂ ಸಮಾಜ ಅಂದ್ರೆ ಭಯ ಇದ್ದೇ ಇರುತ್ತೆ... ಯಾರಾದ್ರೂ ಮಾತಾಡ್ದಾ ಅಂತಿಟ್ಕೋ..ಅವನು ಉಳಿದವರೆಲ್ಲರ ವಿರೋಧ ಕಟ್ಕೋಬೇಕಾಗತ್ತೆ.... ಮುಂದೇನೋ ಹೇಳುತ್ತಾನೆ ಅಂದ್ಕೊಂಡೆ... ಅಷ್ಟಕ್ಕೇ ನಿಲ್ಲಿಸಿಬಿಟ್ಟ... ಆ ಮೌನಕ್ಕೆ ಹೆಚ್ಚು ಅರ್ಥವಿದ್ದಂತೆ ನನಗೂ ಅನ್ನಿಸಲಿಲ್ಲ...

ತೋಟ ಅಂದ್ರೆ ನಾನು ಹೂ ಹಣ್ಣೀನ ಗಿಡ ಬೆಳೆಸುತ್ತಾರೆ ಅಂದ್ಕೊಂಡಿದ್ದೆ...ಅಲ್ಲ ಅಲ್ಲೂ ಅಡಿಕೆ ಗಿಡಗಳೇ..ಅಲ್ಲಲ್ಲಿ ತೆಂಗಿನ ಮರ.. ಒಂದೆರಡು ಬಾಳೆ ಗಿಡ..ಅಷ್ಟೇ..ಉಳಿದದ್ದೆಲ್ಲಾ ಕಳೆಗಳೇ..ಕಾಲಿರಿಸಲು ಜಾಗ ಹುಡುಕಬೇಕು..

ಇಲ್ಲೆಲ್ಲೋ ದಾರಿ ಇತ್ತಲ್ಲಾ..? ನನಗೆ ದಾರಿ ತೋರಿಸುವ ಗೈಡ್ ಪುರಿಯೆು ಈ ರೀತಿ ಪ್ರಶ್ನೆ ಮಾಡಬಾರದಿತ್ತು... ನಾವ್ ನಡೆದದ್ದೇ ದಾರಿ ಎಂಬಂತೆ ನಡೆಯುತ್ತಿದ್ದೆವು..ತೋಟದಲ್ಲಿ ನಡೆಯುವುದು ಕಾಡಿನಲ್ಲಿ ನಡೆದಂತಾಗುತ್ತಿತ್ತು..ಸುಮಾರು ಹತ್ತೆಕರೆ ಇರಬಹುದು..ತೋಟದ ಆ ಅಂಚಿಗೆ ಒಂದು ಪಂಪ್ ಹೌಸ್..ಭಾಗವತರೂ ದಿನೇಶನೂ ಅಲ್ಲೇ ಕುಳಿತಿದ್ದುದು ಕಾಣುತ್ತಿತ್ತು...ದಿನೇಶ ಯಾವುದೋ ವೈರನ್ನು ಹಲ್ಲಿನಿಂದ ಕಚ್ಚಿ ಎಳೆಯುತ್ತಿದ್ದ...ಭಾಗವತರು ಕಾಲಿಗೆ ಮುತ್ತಿಕೊಂಡಿದ್ದ ಸೊಳ್ಳೆಗಳನ್ನ ಸಾಯಿಸುವ ಕಾರ್ಯದಲ್ಲಿ ಮಗ್ನವಾಗಿದ್ದರು..

ಎಷ್ಟಾದರೂ ಇಂಜಿನಿಯರ್ ಅಲ್ಲವೇ..? ಏನಾಗಿದೆ.. ? ನಾನೇ ಆಫೀಸರ್ ತರಹ ಕೇಳಿದೆ... ಏನೂ ಇಲ್ಲಾ.. ಹಂದಿ ಬಿತ್ತಲ್ಲಾ... ಎರಡೂ ವೈರ್ ಶಾರ್ಟ್ಆಗಿ ಬ್ಯಾಟರಿ ಹತ್ತಿರ ಸುಟ್ಟು ಹೋಗಿದೆ..ಸ್ವಲ್ಪ ಕಟ್ ಮಾಡಿ ಮತ್ತೆ ಜಾಯಿಂಟ್ ಮಾಡಿದರೆ ಸರಿ ಆಗುತ್ತೆ ದಿನೇಶ ವಿವರಿಸಿದ..ನಾನೂ ನಮ್ಮ ಲ್ಯಾಬ್ನಲ್ಲಿ ಸುಟ್ಟು ಹೋದಂತೆ ಎನೋ ಆಗಿರಬೇಕು ಅಂದುಕೊಂಡೆ..

ಆ ದಿನೇಶನ ಬಗ್ಗೆ ಸ್ವಲ್ಪ ಹೆಚ್ಚು ಬರೆಯಬೇಕು ಅನಿಸುತ್ತಿದೆ...ಅದಕ್ಕೆ ಕಾರಣ ಇಲ್ಲವೇನೆಂದಲ್ಲ...ನಮ್ಮ ವಯಸ್ಸಿನ ಹುಡುಗ ಈ ರೀತಿ ದುಡಿದು ಓದುತ್ತಿದ್ದಾನೆ ಅಂದರೆ ನಮಗೆ ಕುತೂಹಲ ಮೂಡುವುದು ಸಹಜ...ಆ ಕುತೂಹಲವೇ ಮಾತಿಗೆ ತಿರುಗಿತು..

ದಿನೇಶ್...ಇವತ್ತು ನಿಮಗೆ ಕಾಲೇಜಿಲ್ವಾ..?

ಏನ್ ಸರ್ ಇವತ್ತು ಭಾನುವಾರವಲ್ವಾನೀವ್ ನನ್ನನ್ನು ನೀವು ತಾವು ಅಂತ ಕರೀಬೇಡಿ.. ಸರಿ ಇರಲ್ಲ...

ಸರಿ ನೀನೂ ನನ್ನನ್ನು ಸರ್ ಅಂತೆಲ್ಲಾ ಕರೀಬೇಡ

ಛೆ..ಕಾಲೇಜಿಲ್ಲ ಅಂದ್ರೆ ದಿನ,ತಿಥಿ,ವಾರ,ನಕ್ಷತ್ರ ಎಲ್ಲವೂ ಮರೆತು ಹೋಗುತ್ತದೆ..

ಇದನ್ನೆಲ್ಲಾ ಕಾಲೇಜಿನಲ್ಲೆ ಕಲಿತದ್ದಾ?

ಕಾಲೇಜಾ..? ಹೋಗ್ದೆ ನಾಲ್ಕೈದು ದಿನ ಆಯ್ತು..ಕಾಲೇಜಿನಲ್ಲಿ ಯಾರು ಇದನ್ನೆಲ್ಲಾ ಹೇಳ್ಕೊಡ್ತಾರೆ..? ಎಲ್ಲಾ ಅಪ್ಪ ಮಾಡುವುದನ್ನು ನೋಡಿ ನೋಡಿ ಕಲಿತದ್ದು...ಜೀವನ ಆಗಬೇಕಲ್ಲಾ..

ದಿನೇಶ ನಮಗಿಂತ ಎತ್ತರದಲ್ಲಿದ್ದ.. ಅಪ್ಪ ಹೇಳುವುದನ್ನೂ ಕೇಳದೆ ನಾವು ಮಾಡಿದ್ದೇ ಸರಿ ಎನ್ನುವ ನಮ್ಮ ನಡುವೆ ಅಪ್ಪನಿಂದ ಕಲಿತು ಅಪ್ಪನಿಗೆ ಆಸರೆಯಾಗಿರುವ ದಿನೇಶ ದೊಡ್ಡವನಂತೆ ಕಂಡ... ಜೀವನ ಬುದ್ಧಿಯನ್ನು ಸ್ವಲ್ಪ ಹೆಚ್ಚೇ ಬೆಳೆಸಿತ್ತು..

ಭಾಗವತರೇ ಇದು.. ಸರಿಯಾಯ್ತು...ನಾ ಹೊರಡ್ತೇನೆ.. ದಿನೇಶ ಹೊರಡಲು ಸಿದ್ಧನಾದ.

ಏನ್ ಸರಿಯಾಯ್ತೋ ಏನೋ...ಮತ್ತೆ ಹಂದಿ ಬಂದು ಎಲ್ಲಾ ಹಾಳು ಮಾಡದಿದ್ರೆ ಸಾಕು.. ನೀ ಮನೆ ಕಡೆ ಬಂದು ಅವಲಕ್ಕಿ ತಿಂದ್ ಹೋಗಬಹುದಿತ್ತು... ನುಸಿ ಹೊಡೆಯುತ್ತಿದ್ದ ಭಾಗವತರು ಎದ್ದು ನಿಂತರು..

ಇಲ್ಲಾ..ಅಪ್ಪನಿಗೆ ಔಷಧ ತರ್ಲಿಕ್ಕೆ ಹೋಗಬೇಕು...

ಸರಿ..ಪಾಂಡುಗೆ ಹೇಳು..ದುಡ್ಡು ಇನ್ನೊಂದಿನ ಕೊಡ್ತಾರಂತೆ..ಅಂತ...

ಆದ್ರೂ..ಇವತ್ತು ಕೊಟ್ಟಿದ್ರೆ .......

ಇಲ್ಲಾ ಅಂತ ಹೇಳಿದ್ನಲ್ಲಾ...ಮೊದ್ಲೇ ಅಡಿಕೆ ರೇಟಿಲ್ಲಾ...ಈ ಹಂದಿ ಬಂದು ಇಷ್ಟೆಲ್ಲಾ ರಾಮಾಯಣ ಮಾಡಿದೆ..ದುಡ್ಡೆಲ್ಲಾ ಕುಮ್ಟೆಗೆ ಹೋಗಿ ಬಂದ ಮೇಲೆ.. ಸ್ವಲ್ಪ ಮುನಿಸಿನಿಂದಲೇ ಹೇಳಿದರು ಭಾಗವತರು.

ದಿನೇಶ ಒಂದೂ ಮಾತನಾಡದೆ ಹೊರಟು ಹೋದ..ಅದು ಸಹಜ..ಕೆಲಸ ಮಾಡಿದ ಮೇಲೆ ರೇಗಾಡಿದರೆ ಎಂಥವರಿಗೂ ಬೇಸರವಾಗುತ್ತದೆ..ಅದೂ ನಮ್ಮಂಥ ಬಿಸಿರಕ್ತದವರಿಗೆ...

ಇಷ್ಟೊತ್ತಿಗೆ ಸೂರ್ಯ ಮೇಲೆ ಬಂದು ಆಕಾಶದ ನೀಲಿಯನ್ನು ಬೆಳ್ಳಗೆ ಮಾಡಿದ್ದ.. ತೋಟದ ಹಸಿರಿನ ನಡುವೆ ಅಲ್ಲಲ್ಲಿ ಬಿದ್ದ ಬಿಸಿಲು ಕಳೆಗಳ ಮೇಲೆ ಚಿತ್ತಾರ ಬಿಡಿಸಿತ್ತು.. ಭಾಗವತರು ಬಂದ ದಾರಿಯಲ್ಲೇ ಮರಳತೊಡಗಿದರು.. ಪುರುಷೋತ್ತಮಾ.. ಬನ್ನಿ ಮನೆಗೆ ಹೋಗುವ..ಹೊತ್ತಾತು..ಸ್ನಾನ ಮಾಡಿ ದೇವರಪೂಜೆ ಬೇರೆ ಮಾಡಬೇಕು... ಪೂಜೆಯನ್ನು ಬೇರೆ ಯಾರದ್ದೋ ಸಲುವಾಗಿ ಮಾಡುವಂತ ಧ್ವನಿಯಲ್ಲಿ ಭಾಗವತರು ಕೂಗಿದರು.

ನಾನೂ ಪುರಿಯೂ ನಿಧಾನವಾಗಿ ಹೆಜ್ಜೆ ಹಾಕತೊಡಗಿದೆವು..ದಿನೇಶನ ಬಗ್ಗೆ ಕೇಳಬೇಕೆನಿಸಿದರೂ ಕೇಳಲಿಲ್ಲ..







ಭಾಗವತ

ಏಯ್ ಏಳೋ ..ಊರ್ ಬಂತು... ಬೆಳಿಗ್ಗೆ ಬೆಳಿಗ್ಗೆ ಯಾರಿದು...?ಈ ತರ ತೊಂದ್ರೆ ಕೊಡ್ತಾ ಇದ್ದಾರಲ್ಲ..ಅಂತ ಎದ್ದು ಕುಳಿತೆ.ಆಗ ಜ್ಞಾನೋದಯವಾಯಿತು.ಓಹ್ ಬಸ್ನಲ್ಲಿದ್ದೇನೆ.ಪಕ್ಕದಲ್ಲಿ ಪುರಿ ನನ್ನನ್ನು ಎಬ್ಬಿಸ್ತಾ ಇದ್ದಾನೆ. ಅಯ್ಯೋ ಇಷ್ಟು ಬೇಗ ಊರು ಬಂದ್ಬಿಡ್ತಾ ಅಂತ ಎದ್ದು ಶೂ ಹಾಕ್ಕೊಂಡೆ.ನನಗೆ ಈ ಸ್ಲೀಪರ್ ಬಸ್ ಅಂದ್ರೆ ಅಷ್ಟೆ.ಹತ್ತಿದ ಕೂಡಲೇ ನಿದ್ದೆ.ಇಳಿಯೋ ಜಾಗ ಬಂದರೂ ಎಚ್ಚರ ಆಗಲ್ಲ.ಹೀಗಾಗಿ ನಾನು ಒಬ್ಬೊಬ್ಬನೇ ದೂರ ಪ್ರಯಾಣ ಮಾಡುವುದೇ ಇಲ್ಲ.ಈಗ ಜೊತೆಗೆ ಪುರಿ ಇದ್ದಾನಲ್ಲ.ಹೆದರಿಕೆಯಿಲ್ಲ.ಹೀಗಾಗಿ ನಿದ್ದೆ ಜೋರಾಗೇ ಬಂದಿತ್ತು.ಬಸ್ಸಿಂದ ಇಳ್ದಾಗಲೇ ಗೊತ್ತಾಗಿದ್ದು.ನಾವ್ ಬೆಂಗಳೂರಿನಿಂದ ಹನ್ನೆರಡು ತಾಸುಗಳ ಸುದೀರ್ಘ ಪ್ರಯಾಣ ಮಾಡಿದ್ದು ನೀಲಿ ಬಣ್ಣದ ಬಸ್ಸಿನಲ್ಲಿ ಅಂತ. 'ನೀಲಿ ನನ್ನ ನೆಚ್ಚಿನ ಬಣ್ಣ..ವಿಶಾಲತೆಯ ಸಂಕೇತ..'ಅಂತ ಆಗಾಗ ತತ್ತ್ವಜ್ಞಾನಿಯಂತೆ ಮಾತನಾಡುತ್ತಿರುತ್ತೇನೆ.ಹೀಗಾಗಿ ಚೆನ್ನಾಗಿ ನಿದ್ದೆ ಮಾಡಲು ಅವಕಾಶ ಕೊಟ್ಟ ಆ ನೀಲಿ ಬಸ್ಸಿನ ಬಗ್ಗೆ ಏನೋ ಅಭಿಮಾನ.

ರೈಟ್..... ಬಸ್ ಹೊರಟಿತು. ಸುತ್ತಲಿನ ನೀಲಿ ಬಣ್ಣ ಮಾಯವಾಗಿ ಹಸಿರಾಯಿತು. ಏಯ್ ಈ ಕಡೆ ಬಾರೋ.. ಪುರಿ ಬ್ಯಾಗ್ ಹಿಡಿದು ಮುಂದಕ್ಕೆ ಹೊರಟ.ನಾನು ಹಿಂಬಾಲಿಸಿದೆ.ಪುರಿಯ ಚಪ್ಪಲಿ ಬಸ್ ಹತ್ತುವಾಗ ಬಾಗಿಲಿಗೆ ಸಿಕ್ಕಿ ಹರಿದಿತ್ತು.ಅದು ದಾರಿಯಂತಿರಲಿಲ್ಲ.ವರ್ಷಕ್ಕೆ ಒಮ್ಮೆ ಜನ ಓಡಾಡುವ ದಾರಿಯಿರಬೇಕು ಅಂದುಕೊಂಡೆ.ಪುರಿ ಹರಿದ ಚಪ್ಪಲಿಯ ಕಾರಣದಿಂದ ನಿಧಾನವಾಗಿ ಕಾಲೆಳೆಯುತ್ತಿದ್ದ ಪುರಿ ಕಾಲಿಗೆ ಸಿಕ್ಕ ಒಣ ಎಲೆಗಳನ್ನು ಬದಿಗೆ ಸರಿಸುತ್ತಾ ದಾರಿ ಮಾಡುತ್ತಿದ್ದ.
ಮರಗಳು ಈ ಚಳಿಗಾಲದಲ್ಲಿ ಎಲೆ ಉದುರಿಸಿ ಉದುರಿಸಿ ದಾರಿ ಮುಚ್ಚಿಬಿಡುತ್ತವೆ.. ಅವನಂದ.
ನಾನೂ ಓದಿದ್ದೆ..ಚಳಿಗಾಲದಲ್ಲಿಎಲೆ ಉದುರಿಸುವ ಮರಗಳು..ಈಗ ಕಂಡಂತಾಯಿತು..ಅಲ್ವೋ ಇದೇ ಎನೋ ನಿಮ್ಮೂರಿನ ರೆಡ್ ಕಾರ್ಪೆಟ್ ಸ್ವಾಗತ..
ಯಾಕೋ ..ಬ್ಯಾಗ್ ಭಾರವಾಗಿದೆಯಾ..ಹಿಡ್ಕೊಳ್ಲಾ?...
ಪಾಪ ಅವನದೇ ಅವನಿಗೆ ಭಾರವಾಗಿದೆ.ನನ್ನದೇಕೆ ಅವನಿಗೆ ಕೊಡಲಿ..? ಮೊದಲೇ ಚಪ್ಪಲಿ ಹರಿದಿದೆ.ಇನ್ನು ಈ ದಾರಿ ನೋಡಿದರೆ ವನವಾಸದಲ್ಲಿ ರಾಮ ಅನುಭವಿಸಿದ ಕಷ್ಟಗಳಲ್ಲಿ ಇದೂ ಒಂದಿರಬಹುದು ಅನಿಸುತ್ತಿದೆ.ಬೆಂಗಳೂರಿನಲ್ಲಿ ಬೆಳೆದು ಬದುಕಿದ ನನಗೆ ಈ ರೀತಿ ನಡೆದು ಅಭ್ಯಾಸವಿಲ್ಲ ನಿಜ. ಆದರೆ ಆಸಕ್ತಿ ಇದೆಯಲ್ಲಾ..ಅದಕ್ಕೆ ತಾನೇ ಪುರಿ ಕರೆದ ತಕ್ಷಣ ರಜ ಕಳೆಯಲು ಇಲ್ಲಿಗೆ ಬಂದಿದ್ದು. ಹೀಗಾಗಿ ಅವನಿಗೇ ಪುನಃ ಭಾರ ಹೊರಿಸುವುದು ಸರಿಯಲ್ಲಇಂದೆನಿಸಿ ಸುಮ್ಮನಾದೆ. ಬ್ಯಾಗ್ ಹೊತ್ತು ನಾನೂ ಕಾಲೆಳೆಯತೊಡಗಿದೆ.

ಅಯ್ಯುಮ್ಮಾ..ಸುಸ್ತೋ ಸುಸ್ತು ಬಾಯಿ ಹೇಳದಿದ್ದರೂ ಮುಖ ಹೇಳುತ್ತಿತ್ತು.ಪ್ರತಿ ಹೆಜ್ಜೆಗೂ ಬ್ಯಾಗ್ ಭಾರವಾಗುತ್ತಿದೆಯೋ ಹೇಗೆ ಎಂಬ ಅನುಮಾನವೂ ಬಂತು.ಪುರಿ ಮೊದಲೇ ಹೇಳಿದ್ದ.ಸುತ್ತಲೂ ಹಸಿರು.ಗಿಡಮರಗಳ ತಂಪಿನಲ್ಲಿ ನಡೆದುಕೊಂಡು ಹೋಗಬೇಕು.ಬೆಳಿಗ್ಗೆಗೂ ಮಧ್ಯಾಹ್ನಕ್ಕೂ ಭೇದವಿಲ್ಲದೇ ನೆರಳು ನೀಡುವ ಮರಗಳು....ಪೊದೆಗಳ ನಡುವೆ ಕುಳಿತು ಕಿರುಚುವ ಕಾಡಿನ ಕೀಟವರ್ಗ....ಹಕ್ಕಿಗಳ ಚಿಲಿಪಿಲಿಗೆ ಸ್ಪರ್ಧಿಸುವ ನೀರಿನ ಜುಳುಜುಳು...ಇನ್ನೂ ಎನೇನೋ.. ಅವೆಲ್ಲಾ ಇದೆ ನಿಜ..ಆದರೆ ಹಾಳಾದ ಈ ಬ್ಯಾಗ್ ಇರಬಾರದಿತ್ತು.ಹದಿನೈದು ದಿನಗಳ ಮಟ್ಟಿಗೆ ಪುರಿಯ ಮನೆಗೆ ಹೋಗುತ್ತೇನೆ ಎಂದಾಗ ಅಮ್ಮ ನಾಲ್ಕು ಜೀನ್ಸ್,ಆರು ಶರ್ಟ್ ಹಾಕಿ ಬ್ಯಾಗ್ ಕೊಟ್ಟಿದ್ದಳು.ನಾನು ಜೊತೆಗೆ ಎರಡೆರಡು ಶೂ ,ಸ್ವೆಟರ್,ನನ್ನ ವಿಡಿಯೋ ಗೇಮ್ ಸೇರಿಸಿ ಇದೇನೂ ಭಾರವಿಲ್ಲ ಅಂದುಕೊಂಡು ಬಸ್ ಏರಿದ್ದೆ...

ಇದೇ ನೋಡೋ..ನಾಗರ ಕಲ್ಲು..ಹೆಸರಿಗೆ ತಕ್ಕಂತೆ ಕಲ್ಲಿನಲ್ಲಿ ನಾಗರ ಹಾವಿನ ಮುಖ ಕೆತ್ತಿ ಆ ಪೊದರು ಗಿಡಗಳ ನಡುವೆ ನೆಟ್ಟಿದ್ದರು.ಜೋರಾಗಿ ಅರಿಶಿನ ಕುಂಕುಮ ಹಚ್ಚಿದ್ದು ನೋಡಿದರೆ ಜನ ಪೂಜೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿತ್ತು. ಪುರಿ ಬ್ಯಾಗ್ ಇಟ್ಟು ಚಪ್ಪಲಿ ಕಳಚಿ ಕೈ ಮುಗಿದ.ನಾನೂ ಬ್ಯಾಗ್ ಇಟ್ಟೆ..ಶೂ ತೆಗೆಯಲು ಕೈ ಹಾಕಿದ್ದೆ.ಅವನೇ ಬೇಡವೆಂದ.ನನ್ನ ಮುಖ ನೋಡಿ ದೇವರಿಗೆ ಯಾಕೆ ಇವನಿಂದ ಕೈ ಮುಗಿಸಬೇಕೆಂದೆನಿಸಿತೋ ಎನೋ..
ನನಗೆ ದೇವರಿಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅದು ಪುರಿಗೂ ಗೊತ್ತು.ಅಂದಮಾತ್ರಕ್ಕೆ ನಾನು ನಾಸ್ತಿಕನಲ್ಲ.ದೇವರನ್ನು ಬೇರೆಲ್ಲೋ ಹುಡುಕುವವ ನಾನು. ಈ ಕಲ್ಲಿನಲ್ಲಿ, ಗುಡಿಯಲ್ಲಿ ಕಾಣುವುದು ದೇವರಲ್ಲ ಅಂತ ಹಾಸ್ಟೆಲ್ನಲ್ಲಿ ಭಾಷಣ ಬಿಗಿದಿದ್ದೆ.ಕೆಲವರಿಂದ ಚಪ್ಪಾಳೆಯೂ ಸಿಕ್ಕಿತ್ತು.ಈಗ ಪುರಿಯ ಭಾವನೆಗೆ,ಈ ಸುಂದರ ಊರಿನ ಜನರ ನಂಬಿಕೆಗೆ ಬೆಲೆ ಕೊಟ್ಟು ಶೂ ತೆಗೆಯಲು ಕೈಹಾಕಿದ್ದೆ ಅಷ್ಟೇ.ಪುರಿಗೂ ಅದು ಅರ್ಥವಾಯಿತು. ನಮ್ಮೂರಲ್ಲಿ ದೇವರುಗಳು ಜಾಸ್ತಿ..ಸುಮ್ನೆ ದೇವರಿಗೆ ಕೈಮುಗಿಯೋದು ರೂಢಿ ಮಾಡ್ಕೋ..ಹೋದಲ್ಲೆಲ್ಲಾ ಶೂ ಕಳಚುತ್ತಾ ಹೋದರೆ ಶೂ ಕಾಲನ್ನು ಬಿಟ್ಟೇ ಇರುತ್ತದೆ.. ಮುಂದಿನ ಹೆಜ್ಜೆಗೇ ಬಂದ ಬಲೆಯೊಂದಕ್ಕೆ ಬ್ರಹ್ಮ ರಾಕ್ಷಸ ಎಂದು ಕೈಮುಗಿಯಲು ನಿಂತಾಗಲೇ ಅದು ನಿಜ ಎಂದೆನಿಸಿತು.ಆದರೆ ರಾಕ್ಷಸನಿಗೆ ಯಾಕೆ ಪೂಜೆ ..ಅರ್ಥವಾಗಲಿಲ್ಲ.

ಪುರಿ ಸ್ವಲ್ಪ ಬೇಗನೆ ನಡೆಯಲು ಪ್ರಾರಂಭಿಸಿದ.ಅಂದುಕೊಂಡೆ ಮನೆ ಬಂದಿರಬೇಕು. ಮಾತನಾಡುವ ಉತ್ಸಾಹ ನನಗಿರಲಿಲ್ಲ. ಅವನೇ ಮುಂದುವರಿದ ನಮ್ಮೂರು ವರಾಹ ದೇವಾಲಯಕ್ಕೆ ತುಂಬ ಪ್ರಸಿದ್ಧಿ. ಇಲ್ಲಿನ ವರಾಹ ಸ್ವಾಮಿಗೆ ಭಯಂಕರ ಶಕ್ತಿ ಎಂದು ನಂಬಿಕೆ.ಊರು ಕಾಯುವ ದೈವ ಅದು.. ನಾ ಕೇಳಿದೆ ಎಲ್ಲಿದೆ..? ಇಲ್ಲೇ ಇನ್ನೇನು ಐದೇ ನಿಮಿಷ.. ಅಬ್ಬ ಐದು ನಿಮಿಷಗಳಾದ ಮೇಲೆ ಬ್ಯಾಗ್ ಇಡಲು ಒಂದು ನೆಪವಾಯಿತು ಅಂದುಕೊಂಡೆ. ಈಗ ದಾರಿ ಸ್ವಲ್ಪ ಅಗಲವಾಗುತ್ತಾ ಬಂತು. ಜನರ ವಾಸ ಹತ್ತಿರವಿದ್ದಂತನಿಸಿತು. ಸೂರ್ಯ ಇನ್ನೂ ಸುಡಲು ಪ್ರಾರಂಭಿಸಿರಲಿಲ್ಲ.ಪವರ್ ಕಡಿಮೆಯಾದ ಟಾರ್ಚ್ನಂತೆ ಮಂದ ಬೆಳಕನ್ನು ಕೊಡುತ್ತಿದ್ದ.ಅದು ಆ ಮಂಜಿನಲ್ಲಿ ಕರಗಿ ಮಂಜನ್ನೂ ಕರಗಿಸಲು ಪ್ರಯತ್ನಿಸುತ್ತಿತ್ತು.ದೇವಾಲಯದ ಕಳಸವೊಂದು ಕಾಣಿಸಿತು. ಅಂದುಕೊಂಡೆ ಇದೇ ಇರಬೇಕು ವರಾಹ ಸ್ವಾಮಿ ದೇವಸ್ಥಾನ.. ಬೆಳಿಗ್ಗೆಯೆು ಸುಮಾರು ಜನರಿದ್ದರು.. ಇಷ್ಟು ಬೆಳ್ಳಂಬೆಳಗ್ಗೆನೇ ದೇವಸ್ಥಾನಕ್ಕೆ ಜನ ಬರುತ್ತಾರಾ...? ಪ್ರಶ್ನಿಸಿದೆ. ಅವನು ಮೌನವಾದ.ಆತನ ಕುತೂಹಲ ತುಂಬಿದ ಕಣ್ಣೇ ಹೇಳಿತು.ಇದು ಪ್ರತಿದಿನದಂತೆ ಅಲ್ಲ.ಇಂದೇನೋ ವಿಶೇಷವಿರಬೇಕು..

ನಿನ್ನೆ ರಾತ್ರಿ ನಿಮ್ಮನೆ ತೋಟಕ್ಕೆ ಬಂದ ಹಂದಿ ದೇವಸ್ಥಾನದ ಜಾಗದಲ್ಲಿ ಸತ್ತು ಬಿದ್ದಿದೆ. ಎಲ್ಲಾ ಮೈಲಿಗೆ ಆಯಿತಂತೆ. ಬ್ಯಾಗ್ ಇಡುತ್ತಿದ್ದಂತೆ ಪಕ್ಕದಲ್ಲಿಂದ ಧ್ವನಿ ಕೇಳಿ ಬಂತು.ಪುರಿ ಪ್ರತಿಕ್ರಿಯಿಸಿದ. ಯಾವುದು..... ದೇವಸ್ಥಾನದ ಹಂದಿಯಾ?.. ಭಯ ಹಾಗೂ ಕುತೂಹಲ ಮುಖದಲ್ಲಿತ್ತು... ಅಲ್ಲ ಅದಲ್ಲ ....ಯಾವುದೋ ಕಾಡ್ ಹಂದಿ.. ಸಮಾಧಾನವಾಯಿತು.

ನಿಮ್ಮಪ್ಪ ಕರೆಂಟ್ ಬೇಲಿ ಸ್ವಿಚ್ ಹಾಕಿಯೆು ಮಲ್ಕೊಂಡಿದ್ನಂತೆ..ಹಂದಿ ರಾತ್ರಿ ಪಂಜರಗಡ್ಡೆ ಬುಡ ಕೆದರಿ ಕರೆಂಟ್ ಬೇಲಿ ಹಾರಿದೆ..ಶಾಕ್ ಹೊಡೆಸಿಕೊಂಡು ಸತ್ತಿತು... ಹಂದಿಯನ್ನು ನೋಡಿದೆ.ವಿಕಾರವಾಗಿ ಬಾಯಿ ತೆರೆದು ಬಿದ್ದಿತ್ತು. ಕರೆಂಟ್ ಬೇಲಿಯ ಗೂಟಗಳೂ ಹತ್ತಿರ ಬಿದ್ದಿದ್ದವು. ಬೇಲಿಯ ತಂತಿ ಹಂದಿಯ ಕಾಲಿಗೆ ಸುತ್ತಿತ್ತು. ಬಾಯಿಂದ ಬಂದ ರಕ್ತ ಹೆಪ್ಪುಗಟ್ಟಿ ಕರ್ರಗಾಗಿತ್ತು..ನಾನಲ್ಲಿ ಸೈಂಟಿಸ್ಟ್ ತರ ಬಗ್ಗಿ ಬಗ್ಗಿ ನೋಡುತ್ತಿದ್ದೆ.ಉಳಿದವರೆಲ್ಲಾ ನನ್ನನ್ನೇ ನೋಡುತ್ತಿದ್ದಾರೆಂದು ಸುಮ್ಮನಾದೆ.

ಅಲ್ಲ ವೆಂಕಟ್ರಮಣನಿಗೆ ಬುದ್ಧಿ ಬೇಡವಾ..ದೇವಸ್ಥಾನದ ಗಡಿಯವರೆಗೂ ತನ್ನ ಬೇಲಿ ಹಾಕಿದ ..ಈಗ ನೋಡು ಏನಾಯಿತು.. ಹೌದು ಮತ್ತೆ..ದೇವಸ್ಥಾನದ ಜಾಗ ಹೊಡೆಯಲು ನೋಡಿದರೆ ಆಗುವುದೇ ಹೀಗೆ.. ಅಲ್ಲ ಅವನಿಗಾದ್ರೂ ಏನ್ ಗೊತ್ತಿತ್ತು..ಜಾಗ ಅವನದ್ದು ಅಂತ ಬೇಲಿ ಹಾಕಿದ..ಈ ಹಂದಿ ನೋಡಿಕೊಂಡು ಹೋಗಿ ದೇವಸ್ಥಾನದ ಗಡಿಯಲ್ಲೇ ಬೇಲಿ ಹಾರ್ಬೇಕಿತ್ತೇ...? ಅಲ್ಲಿದ್ದ ಜನರಾಡುವ ಮಾತುಗಳನ್ನು ಕೇಳಿ ವಿಚಿತ್ರವೆನಿಸಿತು. ಒಂದು ಮೂಕ ಪ್ರಾಣಿ ಸತ್ತದ್ದಕ್ಕೆ ಈ ರೀತಿಯ ವಿವರಣೆ, ವಿಮರ್ಶೆ ಕೇಳಿ ಬೆಂಗಳೂರಿನ ನೆನೆಪಾಯಿತು. ಅಲ್ಲಿ ಮನುಷ್ಯ ಸತ್ತರೂ ಈ ರೀತಿ ಚರ್ಚೆಯಾಗಲಾರದು.. ಊರಿನ ಜನರ ಮುಗ್ಧತೆಗೆ ವಂದಿಸಿದೆ.

ವೆಂಕಟರಮಣ ಅಂದಾಗ ನೆನಪಾಯಿತು.ಅವರು ಪುರಿಯ ತಂದೆ ಎಂದು. ಕ್ಲಾಸಿನಲ್ಲಿ ಒಮ್ಮೆ ನಮ್ಮ ಪುರಿಯ ಹಾಜರಾತಿ ಕರೆವಾಗ ನಮ್ಮ ಸೈಯನ್ಸ್ ಟೀಚರ್ ಒಬ್ಬರು 'ಪುರುಷೋತ್ತಮ್ ವೆಂಕಟಮರಣ ಭಾಗವತ್' ಅಂತ ಕರೆದದ್ದು ಇನ್ನೂ ನೆನಪಿದೆ. 'ರಮಣನಾಗುವುದೆಂದರೆ ಮರಣವೇ' ಎರಡೂ ಸಮನಾರ್ಥಕ ಪದಗಳಿದ್ದಂತೆ ಎಂದು ಗೆಳೆಯರ ಬಳಿ ನನ್ನ ಪದಸಂಪತ್ತಿನ ಕೌಶಲ್ಯವನ್ನು ಮೆರೆದಿದ್ದೆ.....ಗುಂಪಿನಲ್ಲಿ ಮುದಿ ಹೆಣ್ಣು ದನಿಯೊಂದು ಪಕ್ಕದಲ್ಲಿದ್ದ ಇನ್ನೊಬ್ಬಳ ಕಿವಿಯಲ್ಲಿ ಉಸುರಿದ್ದು ಎಲ್ಲರಿಗೂ ಕೇಳಿತು.. ಹಂದಿ ದೇವಸ್ಥಾನದ ಜಾಗದಲ್ಲಿ ಬಂದು ಸತ್ತಿರುವುದನ್ನು ನೋಡಿದರೆ ದೇವರ ಅಂಶವೇ ಇರಬೇಕು..ದೇವ್ರೇ ಊರಿಗೇನೂ ಆಗ್ದೇ ಇರ್ಲಪ್ಪಾ.

ಚಿಕ್ಕಪ್ಪ .. ಅಪ್ಪ ಎಲ್ಲಿ? ... ನಂಗೂ ಗೊತ್ತಿಲ್ಲ ನಿನ್ನೆ ರಾತ್ರಿ ಆಟ ಇತ್ತು..ಈಗ್ ಬಂದೇ ಇನ್ನೂ ಮನೆಗೂ ಹೋಗಿಲ್ಲ..ಅಣ್ಣ ಪಂಚಾಂಗ ತರಲು ಜೋಯಿಸರ ಜೋಡಿ ಮನೆಗೆ ಹೋಗಿರಬೇಕು..ಯಾರೋ ಅಂದ್ರು. ಆಗ ಗೊತ್ತಾಯಿತು ಇಷ್ಟೊತ್ತು ಪುರಿಯ ಜೊತೆ ಮಾತಾಡಿದ್ದು ಅವನ ಚಿಕ್ಕಪ್ಪ ಎಂದು.

ನೋಡಿದರೆ ಅವನ ಚಿಕ್ಕಪ್ಪ ಎಂದ ಹೇಳಲು ಸಾಧ್ಯವೇ ಇಲ್ಲ.ಪುರಿ ಚಿಕ್ಕಪ್ಪನ ಬಗ್ಗೆ ಮೊದಲೇ ಹೇಳಿದ್ದ.ಅವನ ಅಪ್ಪನಿಗಿಂತಲೂ ಹೆಚ್ಚಾಗಿ..ಅವನ ಚಿಕ್ಕಪ್ಪ ಯಕ್ಷಗಾನ ಕಲಾವಿದರು..ಶ್ರೀಧರ ಭಾಗವತ್ ಅಂತ ಅವರ ಹೆಸರು..ಆಟ ಆಟ ಅಂತ ತಿರುಗುತ್ತಲೇ ಇರ್ತಾರೆ..ಮನೆಯಲ್ಲಿರೋದೇ ಕಡಿಮೆ..ಇನ್ನೊಮ್ಮೆ ಅವರನ್ನು ಗಮನಿಸಿದೆ. ದಪ್ಪ ಮುಖ, ಎಣ್ಣೆಗಪ್ಪು ಬಣ್ಣ, ಪೂರ್ತಿ ಹಿಂದೆ ಬಾಚಿದ ಕಪ್ಪು ಕೂದಲು..ಅಲ್ಲಲ್ಲಿ ಬೆಳ್ಳಿ ರೇಖೆಗಳನ್ನು ಗಮನಿಸದೇ ಇದ್ದರೆ ಯುವಕರೆಂದೇ ಹೇಳಬಹುದು..ಮೀಸೆ ತೆಗೆದು ಹುಬ್ಬುಗಳನ್ನು ತೀಡಿದ ರೀತಿ ನೋಡಿ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನೂ ಗಂಡಸರೇ ಮಾಡುತ್ತರೆಂಬುದಕ್ಕೆ ಸಮರ್ಥನೆ ಸಿಕ್ಕಂತಾಯಿತು. 'ಶ್ರೀಧರ ಭಾಗವತರ ಹೆಣ್ಣು ವೇಷ' ಎಂದು ಕರಪತ್ರಗಳಲ್ಲಿ ಮುದ್ರಿಸುವಷ್ಟು ಪ್ರಸಿದ್ಧಿ ನಮ್ಮ ಚಿಕ್ಕಪ್ಪ ಎಂದು ಪುರಿ ಹೇಳುತ್ತಿದ್ದ. ಕಿವಿಯ ಹತ್ತಿರ ರಾತ್ರಿ ಹಚ್ಚಿದ ಬಣ್ಣ ಹಾಗೇ ಉಳಿದಿತ್ತು. ಹಂದಿ ಸತ್ತ ವಿಷಯ ಕೇಳಿ ಚೌಕಿ ಮನೆಯಿಂದ ವೇಷ ಕಳಚಿ ಬಣ್ಣ ಒರೆಸಿಕೊಂಡು ಓಡಿ ಬಂದಿರುವುದನ್ನು ಅವರೇ ಹೇಳಿದರು.

ಅವರ ಹೆಂಡತಿಗಾಗಿ ಕಣ್ಣು ಹುಡುಕ ತೊಡಗಿತು. ಎಲ್ಲಿ ಆ ಹೆಂಗಸು. ಪುರಿಯೋ ಆಕೆಯನ್ನು ಸಾಕ್ಷಾತ್ ತಾಟಕಿಯಂತೆ ಬಿಂಬಿಸಿದ್ದ. ಆಕೆಯ ಸಲುವಾಗಿಯೆು ಮನೆ ಒಡೆದದ್ದು..ಈಗ ಚಿಕ್ಕಪ್ಪ ಬೇರೆ ವಾಸವಾಗಿರುವುದು ಎಂಬುದಾಗಿ ಆಕೆಯ ಗುಣಗಾನ ಮಾಡಿದ್ದ..ಅವಳೇ ಇರಬೇಕು..ಚಿಕ್ಕಪ್ಪನ ಪಕ್ಕದಲ್ಲೇ ನಿಂತಿದ್ದಾಳೆ..ಸಿಡುಕು ಮೂತಿ..ಕೋರೆ ಹಲ್ಲು ಉದ್ದವಿದ್ದರೆ ತಾಟಕಿ ಎನ್ನಬಹುದೇನೋ..ಹೇಗೆ ಶ್ರೀಧರ ಭಾಗವತರಿಗೆ ಗಂಟು ಬಿದ್ದಳು ಎಂದು ಕೇಳಬೇಕೆನಿಸಿತು..ಬೇರೆಯವರ ವಿಚಾರ ನಮಗ್ಯಾಕೆ ಎಂದು ಸುಮ್ಮನಾದೆ...ಅವರ ಮಗನೇ ಇರಬೇಕು..ಅಮ್ಮನ ಕೈಯಿಂದ ಕೊಸರಿಕೊಂಡು ಹಂದಿ ನೋಡಲು ಧಾವಿಸಿದ್ದ... ಮರೀ ನಿನ್ನ ಹೆಸರೇನೋ.? ಮಗುವನ್ನು ಕೇಳಿದೆ. ಬಾಲಚಂದ್ರ.. ಅವನಮ್ಮ ಉತ್ತರಿಸಿದಳು.. ಬಾರೋ... ಅಧಿಕಪ್ರಸಂಗಿ.. ಅವನನ್ನು ಎಳೆದುಕೊಂಡು ಹೋದಳು. ನಾನು ಸುಮ್ಮನಾದೆ..ಅಧಿಕ ಪ್ರಸಂಗ ಮಾಡಿದ್ದು ನಾನಾಗಿತ್ತು.

ಅಪ್ಪಾ... ಪುರಿ ಹೋಗಿ ಅವರ ಕಾಲಿಗೆ ಬಿದ್ದ.ನಾನೂ ಅನುಕರಿಸಿದೆ. ನನಗರ್ಥವಾಯಿತು. ವೆಂಕಟರಮಣ ಭಾಗವತರು ಇವರೇ.. ನೋಡಲು ಪುರಿಯಂತೆ ಇದ್ದರು.ಆಜಾನು ಬಾಹು. ಲುಂಗಿ ಉಟ್ಟಿದ್ದರು. ಮೇಲೆ ಒಂದು ಟವೆಲ್..ಕೆಂಪು ಬಣ್ಣದ್ದು.ಮೀಸೆ ದಪ್ಪನಾಗಿಯೆು ಇತ್ತು.ಯಾರಾದರೂ ಹೇಳಬಹುದು ವಯಸ್ಸು ಐವತ್ತು ದಾಟಿದೆ ಎಂದು. ನಾನು ಅವರನ್ನು ನೋಡಿ ಉಪಚಾರದ ನಗೆ ನಕ್ಕೆ.ಅವರು ನಗಲಿಲ್ಲ.ನನ್ನನ್ನು ಗಮನಿಸಲೂ ಇಲ್ಲ.ಪುರಿ ಮಾತ್ರ ತಪ್ಪಿಸ್ಥತನಂತೆ ಪಶ್ಚಾತ್ತಾಪದ ನಗೆ ಬೀರಿದ. ನಾನಂದುಕೊಂಡೆ ವಿಷಯ ಗಂಭೀರವಾಗಿದೆ.

ಗುಂಪು ಸರಿದು ದಾರಿ ಮಾಡಿಕೊಡುತ್ತಿದ್ದಂತೆ ದೇವಸ್ಥಾನದ ಉಗ್ರಾಣಿಯೂ ಜೋಯಿಸರೂ ದಡ ದಡನೆ ಬಂದು ದೇವಸ್ಥಾನದ ಒಳ ನಡೆದರು. ಜೋಯಿಸರ ಕೈಲಿದ್ದ ಪಂಚಾಂಗ ಹರಿದು ಹಾಳೆಗಳೆಲ್ಲಾ ಹೊರಬಂದಿದ್ದವು.ಅಲ್ಲೇ ಕಟ್ಟೆಯ ಮೇಲೆ ಕುಳಿತು ಪಂಚಾಂಗ ತಿರುಗಿಸಿ ತಿರುಗಿಸಿ ಏನೇನೋ ಲೆಕ್ಕಾಚಾರ ಮಾಡಹತ್ತಿದರು. ಪುರಿ ಅಪ್ಪನನ್ನು ಕೇಳಿದ ಏನಾಯ್ತು....? ಇನ್ನೇನು ಸುಡುಗಾಡು... ಹಂದಿ ನಮ್ಮನೆ ಬೇಲಿ ತಾಗಿ ಸತ್ತಿದೆಯಂತೆ ..ಎಲ್ಲರೂ ನೋಡಿದವರ ಹಾಗೆ ಮಾತಾಡ್ತಾರೆ.. ನಾವು ಶಾಂತಿ ಮಾಡಿಸಬೇಕಂತೆ... ನನಗರ್ಥವಾಗಲಿಲ್ಲ. ಹಿಂದಿನಿಂದ ಇನ್ನೊಂದು ಧ್ವನಿ ಬಂತು. ಮತ್ತೆ.. ನಮ್ಮನೆ ತೋಟದಲ್ಲಾಗಿದ್ರೆ ನಾವು ಮಾಡಿಸುತ್ತಿರಲಿಲ್ಲವೇನು?.. ನಿನ್ನೆ ನಮ್ಮನೆ ಬೇಲಿ ಸ್ವಿಚ್ಚೇ ಹಾಕಿರಲಿಲ್ಲ. ಅವರು ಆಟಕ್ಕೆ ಹೋಗಿದ್ರು..ನನಗೆ ಮರ್ತೆ ಹೋಯ್ತು..ಈಗ ನೋಡಿದ್ರೆ ಮರೆತು ಹೋಗಿದ್ದು ಒಳ್ಳೇದಾಯಿತು ..ಇಲ್ದೇ ಇದ್ರೆ ಹಂದಿ ಯಾರ ಮನೆ ಬೇಲಿ ತಾಗಿ ಸತ್ತಿತು ಅಂತ ಗೊತ್ತೇ ಆಗ್ತಿರ್ಲಿಲ್ಲ... ಅದೇ ಹೆಂಗಸು ಮಾತಾಡಿದ್ದು.

ಆ ಮಾತುಗಳು ಸ್ವಗತವಾಗಿದ್ದರೂ ಅದು ವೆಂಕಟ್ರಮಣ ಭಾಗವತರಿಗೆ ಹೇಳಿದ್ದು ಬಿಂಬಿತವಾಗಿತ್ತು.ಅವಳ ಧ್ವನಿಯಲ್ಲಿ ತಪ್ಪು ಮಾಡಿದವರು ನೀವೇ ಈಗ ಅನುಭವಿಸಿ ಎಂಬ ಧೋರಣೆ ಇತ್ತು. ಜೊತೆಗೆ ನಾವು ತಪ್ಪಿಸ್ಥತರಲ್ಲ..ಎಂಬ ವಿಜಯದ ಛಾಯೆುಯೂ..
ಭಾಗವತರು ಮಾತಾಡಲಿಲ್ಲ.

ಜೋಯಿಸರು ಕಟ್ಟೆಯ ಮೇಲಿಂದ ಇಳಿದರು.ಬಾಯಲ್ಲಿದ್ದ ವೀಳ್ಯವನ್ನು ಅಲ್ಲೇ ಪುಚಕ್ಕನೆ ಉಗುಳಿದರು..ತಮ್ಮ ಕೆಂಪು ಕೆಂಪಾದ ಹಲ್ಲುಗಳನ್ನು ತೋರಿಸುತ್ತಾ ಮುಂದಿನ ಸೋಮವಾರ ಒಳ್ಳೇ ದಿನ.. ದೇವಸ್ಥಾನದಲ್ಲೇ ವರಾಹ ಶಾಂತಿ ಮಾಡಿಸಿಬಿಡೋಣ..ಯಾಕೇಂದ್ರೆ ಮಂಗಳವಾರ ನನಗೆ ವಿಶ್ವನಾಥನ ಮನೆಯ ತಿಥಿಗೆ ಹೋಗಬೇಕು..ಬೇರೆ ಯಾರೂ ಸಿಕ್ತಾ ಇಲ್ಲಾ..ನೀವೇ ಬರಬೇಕು ಅಂತ ವಿಶ್ವನಾಥ ಫೋನ್ ಮಾಡಿದ್ದಾ..ಹ್ಹಿ..ಹ್ಹಿ.. ಅಂದರು. ಮಂಗಳವಾರ ತಿಥಿಗೆ ಹೋಗಬೇಕೆಂದೇ ಸೋಮವಾರ ಒಳ್ಳೆಯ ದಿನವೇ ..ಎಂದು ಕೇಳಬೇಕೆಂದುಕೊಂಡೆ.. ಭಾಗವತರು ಹೂಂ.. ಸರಿ ಮಾಡಲೇಬೇಕು ಅಂತಂದ್ರೆ ಮಾಡೋದೇ..ಇನ್ನೇನ್ ಮಾಡೋಕಾಗತ್ತೆ..ಏನೇನ್ ಸಾಮಾನು ಬೇಕು ಹೇಳಿ..ಪಟ್ಟಿ ಕೊಡಿ..ತರೋಣ.. ಹೇಳಿ ಹೊರಟರು.

ಬ್ಯಾಗ್ ಎತ್ಕೋ..ಹೊರಡೋಣ.. ಅಪ್ಪನ ಕಡೆ ತಿರುಗಿ ನೋಡುತ್ತಾ ಪುರುಷೋತ್ತಮ ನನಗಂದ.ಅವನಪ್ಪ ಬಿರಬಿರನೆ ನಡೆಯುತ್ತಿದ್ದರು.ಅವರಿವರ ಮುಖ ನೋಡಿ ಎನೇನೋ ಅರ್ಥೈಸಿಕೊಳ್ಳುತ್ತಿದ್ದ ನನಗೆ ಬ್ಯಾಗ್ ಎಲ್ಲಿಟ್ಟೆ ಎಂದು ಮರೆತೇ ಹೋಗಿತ್ತು..ದೇವಸ್ಥಾನದ ಕಟ್ಟೆ ಮೇಲಿದ್ದ ಬ್ಯಾಗ್ ತನಗೇನೂ ಸಂಬಂಧವಿಲ್ಲದವರಂತೆ ನಿದ್ರಿಸುತ್ತಿತ್ತು. ಬ್ಯಾಗ್ ಹಿಡಿದು ಪುರಿಯ ಬೆನ್ನು ಹತ್ತಿದೆ. ನನಗರ್ಥವಾಗದ ಕೆಲ ವಿಷಯಗಳ ಮಾಹಿತಿ ನೀಡುವ ಮುಖ ಮಾಡಿದ ಪುರಿ...

ನಮ್ಮನೆ ತೋಟ ಇರೋದು ದೇವಸ್ಥಾನದ ಅಂಚಿಗೆ..ದಿನಾ ದನಗಳ, ಹಂದಿಗಳ ಕಾಟ ತಡೆಯಲಾರದೆ ಇತ್ತೀಚಿಗೆ ಅಪ್ಪ ಕರೆಂಟ್ ಬೇಲಿ ಹಾಕಿದ್ದರು..ಈ ಕರೆಂಟ್ ಬೇಲಿ ಮುಟ್ಟಿ ಯಾರೂ ಸಾಯುವುದಿಲ್ಲ..ಹೆದರಬೇಡಿ...ಅಂತ ಆ ಎಲೆಕ್ಟಿಶಿಯನ್ ಪಾಂಡು ಹೇಳಿದ್ದ..ಈ ಹಂದಿ ಹೇಗೆ ಸತ್ತಿತೋ ಏನೋ... ದೇವಸ್ಥಾನ ತೋಟದ ಪಕ್ಕದಲ್ಲಿದ್ದದ್ದು ದೇವರ ತಪ್ಪು..ಕರೆಂಟ್ ಬೇಲಿ ಮುಟ್ಟಿದ್ದು ಹಂದಿ ತಪ್ಪು ..ನಾವೇನೂ ಮಾಡ್ಲಿಲ್ಲ..ಎಂಬ ಭಾವ ಅದರಲ್ಲಿತ್ತು. ವೆಂಕಟ್ರಮಣ ಭಾಗವತರೋ ಸುಮ್ಮನೆ ನಡೆಯುತ್ತಿದ್ದರು. ಸೌಜನ್ಯಕ್ಕೂ ಒಮ್ಮೆಯೂ ಮಾತಾಡಲಿಲ್ಲ..ಪುರಿ ಮೊದಲೇ ಹೇಳಿದ್ದ..ಅಪ್ಪ ಜಾಸ್ತಿ ಮಾತಾಡಲ್ಲ ಅಂತ..

ಈ ದರಿದ್ರ ಹಂದಿಗೆ ಬೇರೆ ಜಾಗ ಸಿಗಲಿಲ್ಲವೇ..ಸಾಯಲಿಕ್ಕೆ...ಬಂದು ಬಂದು ನಮ್ಮನೆ ತೋಟದಲ್ಲೇ ಬೀಳಬೇಕೆ..ಅದೂ ದೇವಸ್ಥಾನದ ಬದಿ ಅಂಚಿಗೆ..ಎಲ್ಲಾ ನನ್ನ ಪ್ರಾರಬ್ಧ... ಯಾರ್ಯಾರಿಂದಲೋ ಎನೇನೋ ಕೇಳ್ಬೇಕಾಯ್ತು... ಸುಮ್ಮನೆ ಗೊಣಗಿದರು ಭಾಗವತರು. ಯಾರ್ಯಾರೋ ಎಂಬುದು ತನ್ನ ತಮ್ಮನ ಹೆಂಡತಿಗೆ ಎನ್ನುವುದು ತಿಳಿಯಿತು.. ಒಂದು ಮೂಕ ಪ್ರಾಣಿ ಸತ್ತಾಗ ತಮ್ಮ ಗೆಣಸು ಬೇಯಿಸುವ ಜೋಯಿಸರಂತ ಜನ ಒಂದು ಕಡೆ...ತಮ್ಮ ವೈರತ್ವವನ್ನು ಸಾಧಿಸುವ ಚಿಕ್ಕಮ್ಮನಂತವರು ಇನ್ನೂಂದೆಡೆ... ಏನೂ ಮಾಡಲಿಕ್ಕಾಗದೆ ಗೊಣಗುವ ಪುರಿ,ಭಾಗವತರಂತವರು ಮತ್ತೊಂದು ಕಡೆ..ಇವುಗಳ ನಡುವೆ ಸುಮ್ಮನೆ ಕುಳಿತಿದ್ದ ಬ್ಯಾಗೇ ತೂಕವಾಗಿ ಕಂಡಿತು.

ಇವನು ನನ್ನ ಫ್ರೆಂಡ್.. ಹೇಳಿದ್ನಲ್ಲಾ.. ಪುರಿ ಪರಿಚಯ ಭಾಷಣ ಮಾಡಿದ ದಾರಿಯಲ್ಲೇ.. ನಮಸ್ಕಾರ ಅಂಕಲ್.. ಕೈ ಮುಗಿದೆ. ಅವರು ಈ ಸಾರಿ ನಕ್ಕರು.. ಹಿನ್ನೆಲೆಯಲ್ಲಿ ಬೇಸರ ಇಣುಕಿದ್ದನ್ನು ನಾನು ನೋಡಿದೆ..

Saturday, November 22, 2008

ಕಾನಲ್ಲೇ ಆರಂಭ

ಕಾನ್ ಜಿರಲೆ ... ಮಲೆನಾಡಿನಲ್ಲಿ ರಾತ್ರಿಯಿಡೀ ಕಿರುಚುತ್ತಾ ಹಲವಾರು ನಿದ್ರೆಗಳನ್ನು ಕಡಿಯುತ್ತಿರುವ ಒಂದು ಕೀಟ ವರ್ಗ... ಹಗಲೆಲ್ಲೂಕಾಣಿಸಿಕೊಳ್ಳದೆ ರಾತ್ರಿಯಾದೊಡನೆ ಎಲ್ಲಿದ್ದೇನೆ ಎಂಬ ಕುರುಹನ್ನೂ ಕೊಡದೆ ಸುಮ್ಮನೆ ಕಿರುಚುತ್ತದೆ ... ಇದನ್ನು ಕಣ್ಣಿನಲ್ಲಿಕಂಡವರಿಗಿಂತ ಕಿವಿಯಿಂದ ಕಂಡವರೇ ಜಾಸ್ತಿ... ಸಣ್ಣವರಿಗೆ ಹೆದರಿಕೆಯ ಪ್ರಾಣಿಯಾಗಿ ,ಓದುವ ಮಕ್ಕಳಿಗೆ ಕಿರಿಕಿರಿಯ ಪ್ರಾಣಿಯಾಗಿ, ದೊಡ್ಡವರಿಗೆ ಚಿಂತೆಗಳನ್ನು ಕೆದರುವ ಶಬ್ದವಾಗಿ, ಮುದುಕರಿಗೆ ಕೇಳದ ಅಸ್ಪಷ್ಟ ಶಬ್ದವಾಗಿ ಕಾನ್ ಜಿರಲೆ ಬದುಕಿ ಬಾಳಿದೆ..

ಅಂತೆಯೇ ಈ ಜಾಗದಲ್ಲಿ ಒಂದು ಅನುಭವವಿದೆ.. ಕಾನ್ ಜಿರಲೆಯಂತೆ ಇದು ಯಾರಿಗೂ ಕಾಣದೆ ಗುಂಯ್ ಗುಡುತ್ತದೆ.. ಮತ್ತು ಅದರಂತೆ ಅವಿಶೇಷವಾಗಿಯೇ ಉಳಿಯುತ್ತದೆ.. ಇದೊಂದು ಲಹರಿ.. ನಿಜವೋ ಸುಳ್ಳೋ ಎಂಬುದು ನಿಮಗೆ ಬಿಟ್ಟಿದ್ದು...ಕಥೆಗೆ ಆರಂಭವಿದೆಯೇ ಹೊರತು ಅಂತ್ಯ ಕಾಣುವುದಿಲ್ಲ ...ಕಥೆ ಹೋದಂತೆ ನಾನು ಹೋಗುತ್ತಿದ್ದೇನೆ ...ಬರೆಯುತ್ತಿದ್ದೇನೆ .. ಓದಿಕೊಳ್ಳಿ..